ರೈತರಿಂದ ಖರೀದಿಸಿದ ಬೆಳೆಯನ್ನು ದುಪ್ಪಟ್ಟು ಬೆಲೆಗೆ ಮಾರಿದಲ್ಲಿ ಕಠಿಣ ಕ್ರಮ-ಸಚಿವ ಎಸ್.ಟಿ. ಸೋಮಶೇಖರ್

 

ತುಮಕೂರು :

      ಕೋವಿಡ್-19 ಸೋಂಕು ಹರಡದಂತೆ ಜಾರಿಯಲ್ಲಿರುವ ಲಾಕ್‍ಡೌನ್ ಸಂದರ್ಭದಲ್ಲಿ ರೈತರಿಂದ ಖರೀದಿಸಿದ ಹಣ್ಣು, ತರಕಾರಿಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ವರ್ತಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಎಚ್ಚರಿಕೆ ನೀಡಿದರು. 

      ನಗರದ ಅಂತರಸನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರೈತರು ಬೆಳೆದಂತಹ ತರಕಾರಿ, ಹಣ್ಣುಗಳನ್ನು ನೇರವಾಗಿ ಮಾರಾಟ ಮಾಡಲು ಎಪಿಎಂಸಿ.ಗೆ ತರುವ ಸಮಯದಲ್ಲಿ ಚೆಕ್‍ಪೋಸ್ಟ್‍ಗಳಲ್ಲಿ ಹಾಗು ಪೊಲೀಸರಿಂದ ಅಡಚಣೆ ಉಂಟಾಗಬಾರದೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಬಂಧಿಸಿದವರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಎಪಿಎಂಸಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

      ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದರೂ ಸಹ ರಾಜ್ಯದ ಕೆಲವು ಕಡೆ ಚೆಕ್‍ಪೋಸ್ಟ್‍ಗಳಲ್ಲಿ ರೈತರು ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ರೈತರು ಯಾವುದೇ ಬೆಳೆ ಬೆಳೆಯಲಿ, ಮಾರಕಟ್ಟೆಗೆ ತಂದು ಮಾರಾಟ ಮಾಡಲು ಯಾವುದೇ ರೀತಿ ಸಮಸ್ಯೆಯಾಗಬಾರದು. ರೈತರಿಂದ ಖರೀದಿಸಿ ಹಣ್ಣು, ತರಕಾರಿಯನ್ನು ವರ್ತಕರು ತಮಗಿಷ್ಟ ಬಂದ ದರದಲ್ಲಿ ಮಾರಾಟ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

      ಮುಂಜಾಗ್ರತಾ ಕ್ರಮವಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾರಾಟ ಮಾಡಲು ಬರುವ ಪ್ರತಿಯೊಬ್ಬ ರೈತರಿಗೂ ಕಡ್ಡಾಯವಾಗಿ ಮಾಸ್ಕ್ ವಿತರಣೆ, ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಬೇಕು. ಎಪಿಎಂಸಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು ಸಮಸ್ಯೆಯಾಗುತ್ತಿದ್ದು, ರೈತರಿಗೆ ಅರಿವು ಮೂಡಿಸುತ್ತಿರುವುದರಿಂದ ಸಮಸ್ಯೆ ಬಗೆಹರಿಯುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾರ್ವಜನಿಕರೂ ಸಹ ಸಹಕರಿಸಬೇಕೆಂದು ಮನವಿ ಮಾಡಿದರು.

      ರೈತರಿಂದ ಖರೀದಿಸಿದ ಹಣ್ಣು, ತರಕಾರಿಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

      ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆನ್ನೆ ಬೆಂಗಳೂರಿನ ತರಕಾರಿ, ಹಣ್ಣಿನ ಅಂಗಡಿಗಳಿಗೆ ಭೇಟಿ ನೀಡಿ ಎಪಿಎಂಸಿ ಮಾರುಕಟ್ಟೆ ದರ ಹಾಗೂ ವರ್ತಕರು ಮಾರಾಟ ಮಾಡುವ ದರಗಳ ವ್ಯತ್ಯಾಸದ ಮಾಹಿತಿ ಪಡೆದಿದ್ದಾರೆ. ದುಪ್ಪಟ್ಟು ಹಾಗೂ ಅದಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲವೆಂದು ತಿಳಿಸಿದರು.

ರೈತರು ಬೆಳೆದ ಬೆಳೆ ನಷ್ಟವಾಗದೆ ಮಾರಾಟವಾಗಬೇಕೆನ್ನುವ ದೃಷ್ಟಿಯಿಂದ ಮನೆ-ಮನೆಗೆ ಹೋಗಿ ಮಾರಾಟ ಮಾಡಲು ರೈತರಿಗೆ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಬಾರದೆನ್ನುವ ನಿಟ್ಟಿನಲಿ ಜನವಾಸಿ ಪ್ರದೇಶಗಳಿಗೆ ನೇರವಾಗಿ ಸ್ವಂತ/ಬಾಡಿಗೆ ವಾಹನಗಳಲ್ಲಿ ರೈತರು ಹೋಗಿ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದರು.

      ಲಾಕ್‍ಡೌನ್ ಘೋಷಣೆಯಾಗಿರುವ ಸಂದರ್ಭದಲ್ಲಿ ಆಂಧ್ರಪ್ರದೇಶದ ಗಡಿಭಾಗವನ್ನು ಹಾದು ಬರುವಂತಹ ಪಾವಗಡ ತಾಲೂಕಿನ ರೈತರು ತಮ್ಮ ಬೆಳೆಯನ್ನು ಎಪಿಎಂಸಿ.ಗೆ ತರಲು ಸಮಸ್ಯೆಯಾಗುತ್ತಿದೆ. ಆಂಧ್ರದ ಪೊಲೀಸರು ಜಿಲ್ಲೆಗೆ ಪ್ರವೇಶಿಸಲು ಅಡ್ಡಿಯುಂಟು ಮಾಡುತ್ತಿದ್ದಾರೆಂಬ ಪ್ರಶ್ನೆಗೆ ಸ್ಪಂದಿಸಿದ ಸಚಿವರು ಎಪಿಎಂಸಿಯಲ್ಲಿ ಮಾರಾಟ ಮಾಡುವ ಎಲ್ಲ ರೈತರಿಗೂ ಕೃಷಿ ಇಲಾಖೆಯಿಂದ ಪಾಸ್ ನೀಡಲಾಗುತ್ತಿದ್ದು, ಅಂತರ ರಾಜ್ಯಗಳಲ್ಲೂ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿರುವುದರಿಂದ ಈ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

      ಮೈಸೂರು ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುತ್ತಿರುವ ಬಗ್ಗೆ ಮಾಹಿತಿ ನೀಡಿದ ಅವರು ನಂಜನಗೂಡಿನಲ್ಲಿರುವ ಜೂಬಿಲೆಂಟ್ ಕಾರ್ಖಾನೆಯಿಂದ ವೈರಸ್ ಹರಡಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ನಂಜನಗೂಡು ತಾಲೂಕಿನಾದ್ಯಂತ ಬಿಗಿ ಬಂದೋಬಸ್ತ ಮಾಡಲಾಗಿದ್ದು, ಜೂಬಿಲೆಂಟ್ ಕಾರ್ಖಾನೆಯ ಸುಮಾರು 1500 ನೌಕರರನ್ನು ಪ್ರತ್ಯೇಕವಾಗಿಟ್ಟಿದ್ದು, ಕೊರೋನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿದೆ ಎಂದರಲ್ಲದೆ, ಲಾಕ್‍ಡೌನ್ ಅವಧಿ ವಿಸ್ತರಣೆಯ ಬಗ್ಗೆ ಪ್ರಧಾನಮಂತ್ರಿ ಮೋದಿಯವರು ಅಂತಿಮ ನಿರ್ಣಯ ಕೈಗೊಂಡು ಘೋಷಿಸಲಿದ್ದಾರೆ ಎಂದು ತಿಳಿಸಿದರು.

      ಇದಕ್ಕೂ ಮುನ್ನ ಸಚಿವರು ಸೋಂಕು ನಿವಾರಕ ಘಟದೊಳಗಿನಿಂದ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಪ್ರವೇಶಿಸಿ ವರ್ತಕರ ಅಹವಾಲುಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಬಾಳೆಹಣ್ಣು ಅಂಗಡಿ ವ್ಯಾಪಾರಿಯೊಬ್ಬರು ಲಾಕ್‍ಡೌನ್ ಗಿಂತ ಮುನ್ನ ವ್ಯಾಪಾರವಾದಷ್ಟು ಆಗುತ್ತಿಲ್ಲ. ವ್ಯಾಪಾರವಾಗದ ಬಾಳೆಹಣ್ಣನ್ನು ದೇವರಾಯನಗದುರ್ಗದ ನಾಮದ ಚಿಲುಮೆಯಲ್ಲಿ ಕೋತಿಗಳಿಗೆ ನೀಡಲಾಗುತ್ತಿದೆ. ಲಾಕ್‍ಡೌನ್‍ನಿಂದ ಎಲ್ಲ ಹಣ್ಣು-ತರಕಾರಿಗಳ ಬೆಲೆ ಕುಸಿದಿದ್ದು, ರೈತರು ಹಾಗೂ ವರ್ತಕರಿಗೆ ನಷ್ಟ ಉಂಟಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

     ನಂತರ ಮಾರಾಟ ಮಾಡಲು ಹೊಸದಾಗಿ ಅವಕಾಶ ಮಾಡಿಕೊಟ್ಟಿರುವ ಹೂವಿನ ಮಾರುಕಟ್ಟೆಗೆ ಸಚಿವರು ಭೇಟಿ ನೀಡಿ ಹೂವಿನ ವ್ಯಾಪಾರಿಗಳು ಸಮಸ್ಯೆಗಳನ್ನು ಆಲಿಸಿದರು.

     ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಡಿ.ಆರ್. ಪುಷ್ಪ ಮಾತನಾಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತರಕಾರಿ ಮಾರುಕಟ್ಟೆಯ ಅಂಗಡಿ ಮಳಿಗೆಗಳನ್ನು ಒಂದು ಮಳಿಗೆ ಬಿಟ್ಟು ಇನ್ನೊಂದು ಮಳಿಗೆ (Alternate)ಗೆ ಸ್ಥಳಾಂತರಿಸಲಾಗಿದೆ. ಹೂವಿನ ಮಾರುಕಟ್ಟೆಯನ್ನು ರದ್ದುಪಡಿಸಿರುವುದರಿಂದ ಈ ಅಂಗಡಿ ಮಳಿಗೆಯನ್ನು ಸ್ಥಳಾಂತರಿಸಲು ಅವಕಾಶವಾಗಿದೆ. ಕೊರೋನಾ ವೈರಸ್ ನಿಯಂತ್ರಿಸುವ ದೃಷಿಯಿಂದ ರೈತರಿಗೆ ಅರಿವು ಮೂಡಿಸಲು ಮೈಕ್ ವ್ಯವಸ್ಥೆ, ಪೊಲೀಸರ ಸಹಕಾರದಲ್ಲಿ ಬ್ಯಾರಿಕೇಡ್ ವ್ಯವಸ್ಥೆ, ಸರದಿ ಸಾಲಿನಲ್ಲಿ ಅಂತರ ಕಾಪಾಡಿಕೊಳ್ಳಲು ವೃತ್ತಾಕಾರದ ಮಾರ್ಕ್ ಮಾಡಲಾಗಿದೆ. ತರಕಾರಿ, ಹೂ-ಹಣ್ಣು ಮಾರಾಟ ಮಾಡುವ 650 ವರ್ತಕರಿಗೆ ಈಗಾಗಲೇ ಎಪಿಎಂಸಿಯಿಂದ ಪಾಸು ವಿತರಿಸಲಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಸಚಿವರಿಗೆ ಮಾಹಿತಿ ನೀಡಿದರು. 

      ಈ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಮತ್ತಿತರರು ಹಾಜರಿದ್ದರು.

ಎಪಿಎಂಸಿ ಕಚೇರಿಗೆ ಭೇಟಿ:

      ನಂತರ ಬಟವಾಡಿಯ ಎಪಿಎಂಸಿ ಕಚೇರಿಗೆ ಭೇಟಿ ನೀಡಿದ ಸಚಿವರು ರೈತರ ಸಮಸ್ಯೆಗಳ ನಿವಾರಣೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಚ್. ಪರಮಶಿವಯ್ಯ ಅವರು ಸಂಘದ ಕಚೇರಿಗಾಗಿ ಎಪಿಎಂಸಿ ಆವರಣದಲ್ಲಿ ನಿವೇಶನ ಮಂಜೂರು ಮಾಡಲು ಮನವಿ ಮಾಡಿದರು. ಹಾಗೂ ಧಾನ್ಯ ವ್ಯಾಪಾರಿಗಳ ಸಂಘದವರು ನಗರದ 5 ಕಿ.ಮೀ. ವ್ಯಾಪ್ತಿಯೊಳಗೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿಕೊಡಲು ಸಚಿವರಿಗೆ ಮನವಿ ಸಲ್ಲಿಸಿದರು.

ಎಪಿಎಂಸಿ ಯಾರ್ಡ್‍ಗೆ ಭೇಟಿ: 

      ನಗರದ ಎ.ಪಿ.ಎಂ.ಸಿ ಯಾರ್ಡ್‍ಗೆ ಭೇಟಿ ನೀಡಿ ರೈತರು ಬೆಳೆದಂತಹ ಬೆಳೆಗಳನ್ನು ರೈತರೇ ನೇರವಾಗಿ ಜನಸಾಮಾನ್ಯರ ಮನೆಗಳಿಗೆ ತಲುಪಿಸಲು ಯಾರಾದರೂ ಮುಂದೆ ಬಂದರೆ ಅಂಥವರಿಗೆ ಅವಕಾಶ ಮಾಡಿಕೊಡಿ. ಮಾರುಕಟ್ಟೆಯ ದರಕ್ಕೆ ವ್ಯಾಪಾರಿಗಳು ಬದ್ಧವಾಗಿರುವಂತೆ ತಿಳಿ ಹೇಳಬೇಕೆಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕೊರೋನಾ ಸೋಂಕಿನಿಂದಾಗಿ ವ್ಯಾಪಾರಗಳು ಸಂಪೂರ್ಣವಾಗಿ ನಿಂತು ಹೋಗಿವೆ. ನಮ್ಮ ರೈತರು ಬೆಳೆದಂತಹ ಬೆಳೆಗಳನ್ನು ಹೊರ ರಾಜ್ಯಗಳಿಗೆ ಕಳುಹಿಸಲು ವಾಹನಗಳ ಸಮಸ್ಯೆ ಇದೆ ಎಂದು ಲಾರಿ ಮಾಲೀಕರ ಸಂಘದವರು ಸಚಿವರಿಗೆ ಅಹವಾಲು ಸಲ್ಲಿಸಿದರು. 

ಗದ್ದುಗೆಗೆ ಭೇಟಿ:

     ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಮಾಡಿ ಶ್ರೀ ಸಿದ್ದಲಿಂಗ ಸ್ವಾಮಿಗಳ ಆಶೀರ್ವಾದ ಪಡೆದರು.

(Visited 5 times, 1 visits today)

Related posts

Leave a Comment