ಶ್ರೀನಗರದಲ್ಲಿ ಯೋಧರ ಮೇಲೆ ದಾಳಿ : ಹೇಡಿತನದ ಪರಮಾವಧಿ

 ತುಮಕೂರು:

      ಶ್ರೀನಗರದಲ್ಲಿ ಭಾರತೀಯ ಸೇನಾ ಯೋಧರ ಮೇಲೆ ಮಾಡಿರುವ ಉಗ್ರರ ದಾಳಿ ಖಂಡನೀಯ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ ತಿಳಿಸಿದರು.

      ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಅತ್ಯಂತ ಭೀಕರವಾದ ಈ ದಾಳಿ ಹೇಡಿತನದ ಪರಮಾವಧಿ. ಉಗ್ರರು ಪದೇ ಪದೇ ಇಂಥ ಘೋರ ಕೃತ್ಯವನ್ನು ಎಸಗುತ್ತಲೇ ಬಂದಿದ್ದಾರೆ. ಉಗ್ರರಿಗೆ ಪಾಕಿಸ್ತಾನದ ಬೆಂಬಲವಿದೆ ಎಂದು ಸುದ್ದಿ ಕೇಳಿಬರುತ್ತಿದೆ. ಶಾಂತಿಯಿಂದ ಇರಲು ಬಯಸುವ ನಮ್ಮ ಭಾರತದಲ್ಲಿ ಪುನರಾವರ್ತಿತವಾಗಿ ಇಂಥ ಘಟನೆಗಳು ಸಂಭವಿಸುತ್ತಿರುವುದು ವಿಷಾದದ ಸಂಗತಿ. ಭಾರತ ಇದಕ್ಕೆ ತಕ್ಕ ಉತ್ತರ ಕೊಡಲಿದೆ. ಇಲ್ಲದೇ ಹೋದಲ್ಲಿ ಗಡಿಭಾಗದಲ್ಲಿರುವ ಯೋಧರು ಹಾಗೂ ಜನಸಾಮಾನ್ಯರಿಗೆ ಉಳಿಗಾಲವಿರುವುದಿಲ್ಲ. ದಾಳಿಯಲ್ಲಿ ಬಲಿಯಾದ ಮಂಡ್ಯ ಜಿಲ್ಲೆಯ ಯೋಧನಿಗೆ ರಾಜ್ಯ ಸರ್ಕಾರದ ವತಿಯಿಂದ ಪರಿಹಾರ ನೀಡಲಾಗುವುದು. ಮಾನವೀಯತೆ ಇರುವ ಪ್ರತಿಯೊಬ್ಬರೂ ಈ ಕೃತ್ಯವನ್ನು ಖಂಡಿಸಲೇಬೇಕು ಎಂದು ತಿಳಿಸಿದರು.

      ದೇಶದ ಭದ್ರತೆ, ನೆಲ, ಜಲ ರಕ್ಷಣೆ ವಿಚಾರದಲ್ಲಿ ನಾವೆಲ್ಲರೂ ಒಂದೇ ಎಂದು ತಿಳಿಸಿದ ಅವರು ಭಗವಂತ ಮೃತ ಯೋಧರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.

(Visited 22 times, 1 visits today)

Related posts

Leave a Comment