ಯೋಧರಂತೆ ಸಫಾಯಿ ಕರ್ಮಚಾರಿಗಳಿಗೂ ಸಮಾನ ಮನ್ನಣೆ ಇದೆ

ತುಮಕೂರು:

      ದೇಶದ ಗಡಿ ಕಾಯುವ ಯೋಧರಂತೆ ನಗರದ ಆರೋಗ್ಯವನ್ನು ಕಾಪಾಡುವ ಸಫಾಯಿ ಕರ್ಮಚಾರಿಗಳಿಗೂ ಸಮಾನ ಮನ್ನಣೆ ಇದೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಅವರು ತಿಳಿಸಿದರು.

       ನಗರದ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಇಂದು ಸಫಾಯಿ ಕರ್ಮಚಾರಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಲೆತಲಾಂತರಗಳಿಂದ ತಲೆಯ ಮೇಲೆ ಮಲವನ್ನು ಹೊತ್ತು ಊರು- ಕೇರಿಗಳ ಸ್ವಚ್ಛತೆಗಾಗಿ ಶ್ರಮಿಸಿದ್ದವರ ಜೀವನ ಮಟ್ಟವನ್ನು ಉತ್ತಮಗೊಳಿಸಲು ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

      ಚುನಾಯಿತ ಪ್ರತಿನಿಧಿಗಳು, ಆಡಳಿತ ಯಂತ್ರಗಳು ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಫಾಯಿ ಕರ್ಮಚಾರಿಗಳು/ಪೌರಕಾರ್ಮಿಕರಿಗೆ ಇರುವ ಸರ್ಕಾರಿ ಸವಲತ್ತುಗಳ ಬಗ್ಗೆ ಅರಿವು ಮೂಡಿಸಬೇಕು. ಅವರನ್ನು ಮುಖ್ಯ ವಾಹಿನಿಗೆ ತಂದು ಸಮಾಜದಲ್ಲಿ ಸಾಮಾನ್ಯರಂತೆ ಯಾವುದೇ ಬೇಧ ತೋರದೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.

      ಪ್ರಧಾನಿ ಮೋದಿಯವರು ಫೆಬ್ರುವರಿ 24ರಂದು ವಾರಣಾಸಿಯಲ್ಲಿ ಸಫಾಯಿ ಕರ್ಮಚಾರಿಗಳ ಪಾದಪೂಜೆ ಮಾಡುವ ಮೂಲಕ ಪ್ರೇರಣಾದಾಯಕರಾಗಿದ್ದಾರೆ. ಯಾವುದೇ ಸರ್ಕಾರಗಳಿರಲಿ ಸಫಾಯಿ ಕರ್ಮಚಾರಿಗಳಿಗೆ ಮೀಸಲಿರುವ ಯೋಜನೆಗಳನ್ನು ಅನುಷ್ಟಾನಕ್ಕೆ ತರುವ ಜವಾಬ್ದಾರಿಯನ್ನು ನಿಭಾಯಿಸಬೇಕು. ತುಮಕೂರು ಜಿಲ್ಲೆಯಲ್ಲಿ ಪೌರ ಕಾರ್ಮಿಕರ ಖಾಯಂ ನೇಮಕಾತಿಗೆ ಮುಂದಾಗಿರುವ ಜಿಲ್ಲಾಧಿಕಾರಿಗಳ ಕಾರ್ಯ ಅಭಿನಂದನೀಯ ಎಂದರು.

      ಬೆಳಗಾವಿಯ ಸುವರ್ಣಸೌಧದಲ್ಲಿ ಶಾಸಕರು ಕುಳಿತುಕೊಳ್ಳುವ ಆಸನದಲ್ಲಿ ಸಫಾಯಿ ಕರ್ಮಚಾರಿಗಳನ್ನು ಕುಳ್ಳಿರಿಸಿ ಆಯೋಗದ ವತಿಯಿಂದ ಸನ್ಮಾನಿಸುವ ಮೂಲಕ ಅವರಿಗೂ ಸಮಾಜದಲ್ಲಿ ಸಮಾನ ಸ್ಥಾನಮಾನ ಇದೆ ಎಂದು ತೋರಿಸಿಕೊಡಲಾಗಿದೆ. ಸ್ವತಃ ಸಫಾಯಿ ಕರ್ಮಚಾರಿ ಮಗನಾದ ನಾನು ಅವರ ನೋವುಗಳ ಬಗ್ಗೆ ನನಗೆ ಗೊತ್ತಿದೆ. ಸಫಾಯಿ ಕರ್ಮಚಾರಿಗಳ ಹಕ್ಕುಗಳನ್ನು ತಲುಪಿಸುವ ಸಲುವಾಗಿ ಆಯೋಗ ನನ್ನನ್ನು ಸದಸ್ಯನನ್ನಾಗಿ ನೇಮಕ ಮಾಡಿದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ತಿಳಿಸಿದರು.

      ಸಫಾಯಿ ಕರ್ಮಚಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳದೆ ಖಾಯಂ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ನೇಮಕಾತಿ ಖಾಯಂ ಆಗುವವರೆಗೂ ಕಡ್ಡಾಯವಾಗಿ ಕನಿಷ್ಠ ವೇತನ ನೀಡಬೇಕು. ಅವರ ಆರೋಗ್ಯದ ದೃಷ್ಟಿಯಿಂದ ಕಾಲಕಾಲಕ್ಕೆ ತಪಾಸಣಾ ಶಿಬಿರ ನಡೆಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ವಾಸಿಸಲು ವಸತಿ ಕಲ್ಪಿಸಬೇಕು. ಅವರ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ಒದಗಿಸುವ ವ್ಯವಸ್ಥೆ ಮಾಡಬೇಕು ಎಂಬ ನಿಲುವು ಆಯೋಗಕ್ಕಿದೆ ಎಂದು ತಿಳಿಸಿದರು.

      ಸಂಸದ ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿ, 2013ರಲ್ಲೇ ಪೌರ ಕಾರ್ಮಿಕರಿಗೆ ವಸತಿ ಯೋಜನೆ ಜಾರಿಗೆ ತರಲಾಗಿದೆ. ಸಫಾಯಿ ಕರ್ಮಚಾರಿಗಳಿಗೆ ಅಧಿಕಾರಿಗಳು ಸರ್ಕಾರಿ ಸೌಲಭ್ಯಗಳನ್ನು ನ್ಯಾಯಯುತವಾಗಿ ತಲುಪಿಸಬೇಕು. ಮಲವನ್ನು ತಲೆಯ ಮೇಲೆ ಹೊರುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಈ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು. ಎಲ್ಲರಂತೆ ನೆಮ್ಮದಿಯಾಗಿ ಬದುಕುವಂತಹ ಸವಲತ್ತುಗಳನ್ನು ನೀಡಲು ಅಧಿಕಾರಿಗಳು ಹಿಂದು-ಮುಂದು ನೋಡಬಾರದು. ಅವರ ಸುರಕ್ಷತೆಗಾಗಿ ಕಡ್ಡಾಯವಾಗಿ ಸಾಧನ-ಸಲಕರಣೆಗಳನ್ನು ವಿತರಿಸಬೇಕು ಎಂದು ತಿಳಿಸಿದರು.

      ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಮಾತನಾಡಿ, ಮಲ ಹೊರುವ ಪದ್ಧತಿ ಇಂದಿಗೂ ನಡೆಯುತ್ತಿರುವುದು ವಿಷಾಧನೀಯವೆಂದು ತಿಳಿಸಿದ ಅವರು, ಪೌರ ಕಾರ್ಮಿಕರ ಸಮಸ್ಯೆಯನ್ನು ಆಲಿಸಲು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಸಫಾಯಿ ಕರ್ಮಚಾರಿಗಳ ನೇಮಕಾತಿಯಲ್ಲಿ ಕೆಲವು ಲೋಪದೋಷಗಳಿರುವುದರಿಂದ ಖಾಯಂಗೊಳಿಸಲು ವಿಳಂಬವಾಗಿದೆ. ಪರಿಶೀಲನೆ ನಡೆಸಿದ ನಂತರ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಅವರ ಆರೋಗ್ಯದ ಹಿತದೃಷ್ಟಿಯಿಂದ ಕಡ್ಡಾಯವಾಗಿ ಸ್ನಾನ ಗೃಹ ಹಾಗೂ ಶೌಚಗೃಹಗಳನ್ನು ನಿರ್ಮಾಣ ಮಾಡಲಾಗುವುದು. ಪ್ರತಿ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಗೆ ಕ್ರಮ ವಹಿಸಲಾಗಿದೆ. ಎಲ್ಲಾ ಸಫಾಯಿ ಕರ್ಮಚಾರಿಗಳಿಗೂ ಗುರುತಿನ ಚೀಟಿ ವಿತರಿಸಲಾಗಿದೆ. ಅಲ್ಲದೆ ಅವರು ಪಡೆಯುವ ವೇತನದ ಬಗ್ಗೆ ಸ್ಯಾಲರಿ ಸ್ಲಿಪನ್ನು ಮಾಹಿತಿಗಾಗಿ ನೀಡಲಾಗುತ್ತಿದೆ. ಇಎಸ್‍ಐ, ಪಿಎಫ್ ಕಾರ್ಡುಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

      ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೂ ಎಲ್ಲಾ ನಿಯಮಗಳು ಅನ್ವಯವಾಗುತ್ತವೆ. ಸಫಾಯಿ ಕರ್ಮಚಾರಿಗಳಿಗಾಗಿಯೇ ಪ್ರತ್ಯೇಕ ಆಸ್ಪತ್ರೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

 

(Visited 22 times, 1 visits today)

Related posts