ಭೌಗೋಳಿಕ ಮಾಹಿತಿ ವ್ಯವಸ್ಥೆಯಡಿ ಪ್ರಥಮ ಬಾರಿಗೆ ತುಮಕೂರು ಜಿಲ್ಲೆ ಆಯ್ಕೆ!

ತುಮಕೂರು:

      ಸಂಸದರಾದ ಜಿ.ಎಸ್. ಬಸವರಾಜು ಅವರು ಕೇಂದ್ರ ಪುರಸ್ಕøತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಭೌಗೋಳಿಕ ಮಾಹಿತಿ ವ್ಯವಸ್ಥೆಯ ವೆಬ್‍ಸೈಟ್‍ಅನ್ನು ಚಾಲನೆ ನೀಡಿದರು. ಭೌಗೋಳಿಕ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಯಡಿ ಪ್ರಥಮ ಬಾರಿಗೆ ತುಮಕೂರು ಜಿಲ್ಲೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

      ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಪುರಸ್ಕøತ ಕಾರ್ಯಕ್ರಮಗಳ(ದಿಶಾ) ಸಭೆಯ ಅಧ್ಯಕ್ಷತೆವಹಿಸಿ ಈ ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದರು.

      ಯೋಜನಾ ನಿರ್ದೇಶಕ ಎಂ.ಜಯಚಂದ್ರನ್ ಕಾರ್ಯಕ್ರಮದ ಅನುಷ್ಠಾನ ಕುರಿತು ಮಾಹಿತಿ ನೀಡುತ್ತಾ, ಕರ್ನಾಟಕ ರಾಜ್ಯದ ದೂರ ಸಂವೇದಿ ಅನ್ವಯಿಕ ಕೇಂದ್ರದ ವತಿಯಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಭೌಗೋಳಿಕ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ರಾಜ್ಯದಲ್ಲೇ ಪ್ರಥಮವಾಗಿ ತುಮಕೂರು ಜಿಲ್ಲೆಯನ್ನು ಆಯ್ದುಕೊಂಡು ಸರ್ವೆವಾರು ಇಂಚಿಂಚು ಮಾಹಿತಿಯನ್ನು ನಕ್ಷೆಯಲ್ಲಿ ಸಂಗ್ರಹಿಸುವ ಕಾರ್ಯ ಜರುಗಿಸಲಾಗುತ್ತಿದೆ ಎಂದು ಅವರು ಸಭೆಗೆ ತಿಳಿಸಿದರು.

      ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನಗರ, ಪಟ್ಟಣ, ಹೋಬಳಿ, ಗ್ರಾಮಪಂಚಾಯತಿ ಹಾಗೂ ಪ್ರತಿ ಊರುಗಳ ಸರ್ವೆ ನಂಬರ್ ಪ್ರಕಾರ ಸಂಪರ್ಕರಸ್ತೆ, ಸರ್ಕಾರದ ಇಲಾಖೆಗಳ ಕಛೇರಿಗಳ ಕಾರ್ಯ, ಮೂಲಭೂತ ಸೌಕರ್ಯಗಳು, ಪ್ರತಿ ಇಲಾಖೆಯಿಂದ ಆ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ವ್ಯವಸ್ಥೆಗಳ ಮಾಹಿತಿಯನ್ನು ಭೌಗೋಲಿಕ ಮಾಹಿತಿ ವ್ಯವಸ್ಥೆಯಲ್ಲಿ ಅಳವಡಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಥಮ ಬಾರಿಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ವ್ಯಾಪ್ತಿಯಲ್ಲಿ ಬರುವ ನೀರಿನ ಸಂಪನ್ಮೂಲಗಳಾಗಿರುವ ಕೆರೆ, ಬಾವಿ, ಮತ್ತಿತರ ಜಲಸಂಪನ್ಮೂಲ ಮಾಹಿತಿಯನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಅದೇ ಮಾದರಿಯಲ್ಲಿ ಎಲ್ಲಾ ಇಲಾಖೆಗಳ ಮಾಹಿತಿಯನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆಯಡಿಯಲ್ಲಿ ಅಳವಡಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾಗಿದೆ ಎಂದು ಅವರು ಮನವಿ ಮಾಡಿದರು.

      ಆರೋಗ್ಯ, ಶಿಕ್ಷಣ, ಪಂಚಾಯತ್ ರಾಜ್, ಮತ್ತಿತರ ಎಲ್ಲಾ ಇಲಾಖೆಗಳಿಂದ ಆಯಾ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ನೀಡಲ್ಪಡುವ ಸರ್ಕಾರಿ ಯೋಜನೆಗಳ ಸೌಲಭ್ಯಗಳ ಕುರಿತು ಈ ಭೌಗೋಳಿಕ ಮಾಹಿತಿ ವ್ಯವಸ್ಥೆಯಲ್ಲಿ ಅಳವಡಿಸಲು ಜಯಚಂದ್ರನ್ ತಿಳಿಸಿದರು.

      ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ ನಾರ್ಮಲ್ ಗೂಗಲ್ ರೀತಿಯಲ್ಲೇ ಕಾರ್ಯನಿರ್ವಹಿಸಲಿದ್ದು, ಆದರೆ ಇದು ಕೇವಲ ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿರುತ್ತದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಮಾಹಿತಿಯನ್ನು ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ಗ್ರಾಮಲೆಕ್ಕಾಧಿಕಾರಿಗಳು ಸೇರಿ ಮಾಹಿತಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಂಗ್ರಹಿಸಿ ಕೊಡಬೇಕಾಗಿದೆ. ಅದನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆಗೆ ಅಳವಡಿಸುವ ಜವಾಬ್ದಾರಿ ಜಿಲ್ಲಾ ಮಟ್ಟದ ಅಧಿಕಾರಿಗಳದ್ದಾಗಿರುತ್ತದೆ ಎಂದು ಉದಾಹರಣೆ ನೀಡಿ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ತಿಳಿಸಿದರು.

      ಇದೇ ಮಾದರಿಯಲ್ಲಿ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಮಾಹಿತಿಯನ್ನು ಪ್ರಾಥಮಿಕ ಹಂತದಿಂದ ಸಂಗ್ರಹಿಸಿ ಈ ಭೌಗೋಳಿಕ ಮಾಹಿತಿ ವ್ಯವಸ್ಥೆಯಡಿಯಲ್ಲಿ ಯಾವುದೇ ತಪ್ಪು ಇಲ್ಲದೆ ನಿಖರವಾದ ಮಾಹಿತಿಯನ್ನು ಅಳವಡಿಸಬೇಕಾಗಿದೆ. ಇದರಿಂದ ಈ ಜಿಲ್ಲೆಗೆ ಬೇಕಾಗಿರುವ ಸರ್ಕಾರದ ಯೋಜನೆಗಳ ಕಾರ್ಯಾನುಷ್ಠಾನ ಮತ್ತು ಅನುದಾನವನ್ನು ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಯಿಂದ ಪಡೆಯಲು ಸಾಧ್ಯವಿದೆ ಎಂದು ಅವರು ತಿಳಿಸಿದರು.

      ಈ ವ್ಯವಸ್ಥೆಯಲ್ಲಿ ಭೌಗೋಳಿಕ ಹಿನ್ನೆಲೆ, ಸರ್ಕಾರಿ ಸೌಲಭ್ಯ, ಪ್ರತಿ ವ್ಯಕ್ತಿಯ ಮಾಹಿತಿಯನ್ನೂ ಸಹಿತ ಸಂಗ್ರಹಿಸಿಡಲಾಗುವುದು. ಇಲಾಖೆಗಳಿಂದ ಜಾರಿಗೊಳಿಸುವ ಎಲ್ಲಾ ಯೋಜನೆ ಮತ್ತು ಅವುಗಳಿಗೆ ತಗುಲಿದ ವೆಚ್ಚವನ್ನೂ ಸಹ ಸಾರ್ವಜನಿಕರಿಗೆ ಕ್ಷಣಮಾತ್ರದಲ್ಲಿ ಒದಗಿಸಬಹುದಾಗಿದೆ. ಇಲಾಖೆಗಳು ಕಾಲಕಾಲಕ್ಕೆ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ವ್ಯವಸ್ಥೆಯಲ್ಲಿ ಅಳವಡಿಸಬೇಕೆಂದು ಜಿಲ್ಲಾಧಿಕಾರಿಗಳು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಸಿಇಓ ಶುಭಾ ಕಲ್ಯಾಣ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 10 times, 1 visits today)

Related posts

Leave a Comment