ತುಮಕೂರು : ಕಣ್ಮನಸೆಳೆದು ಯಶಸ್ವಿಯಾದ ಫಲಪುಷ್ಪ ಪ್ರದರ್ಶನ

ತುಮಕೂರು : 

     ವರ್ಣಮಯ ಹೂಗಳಿಂದ ಅರಳಿದ್ದ ಆಕೃತಿಗಳು, ನಾನಾ ಹಣ್ಣುಗಳಿಂದ ಮೂಡಿದ್ದ ಆಕಾರಗಳು, ಮಕ್ಕಳನ್ನು ಸೆಳೆಯುವ ಕಾರ್ಟೂನುಗಳು, ಕಲಾವಿದನ ಕಲಾಕುಂಚದಲ್ಲಿ ರೂಪುಗೊಂಡಿದ್ದ ನಾನಾ ಚಿತ್ರಗಳು, ಕಲಾಕಾರಗಳು, ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಪ್ರಾತ್ಯಕ್ಷಿಕೆಗಳು, ಅರಣ್ಯ-ಗುಡ್ಡದ ಪ್ರದೇಶಗಳು, ಜೇನು ಸಾಕಾಣಿಕೆಯ ಮಾದರಿ, ಹೀಗೆ ಹಳ್ಳಿ ಸೊಗಡನ್ನು ಬಿಂಬಿಸುವ ಪಂಚಾಯತಿ ಕಟ್ಟೆಯ ನೋಟ ಹೀಗೆ ನಾನಾ ಬಗೆಯಲ್ಲಿ ಜನವರಿ 31 ರಿಂದ ಮೂರು ದಿನಗಳ ಕಾಲ ತುಮಕೂರು ನಗರಲ್ಲಿ ಅನಾವರಣಗೊಂಡಿದ್ದ ಫಲಪುಷ್ಪ ಪ್ರದರ್ಶನ ನೋಡುಗರ ಕಣ್ಮನಗಳಿಗೆ ತಂಪು ನೀಡಿತು.

      ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ತೋಟಗಾರಿಕಾ ಸಂಘ ಹಾಗೂ ಕೃಷಿ ಇಲಾಖೆ ಆತ್ಮ ಯೋಜನೆ ಸಹಯೋಗದಲ್ಲಿ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ನಡೆದ ಫಲಪುಷ್ಪ ಪ್ರದರ್ಶನ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಮೂರು ದಿನವೂ ವೀಕ್ಷಣೆಗೆ ಜನಸಾಗರವೇ ಹರಿದು ಬಂದಿತ್ತು. ಈ ಫಲಪುಷ್ಪ ಪ್ರದರ್ಶನ `ಸಕಲವೂ ಒಳಗೊಂಡ ನಿಸರ್ಗ ಮಾತೆ’ಯನ್ನು ಒಂದೇ ಸೂರಿನಡಿ ನೋಡಿದಂತಹ ಅನುಭವವನ್ನು ಮನಸ್ಸಿಗೆ ಉಣಬಡಿಸಿತು.

      ಬಗೆಬಗೆಯ ಪುಷ್ಪಗಳು, ಹಣ್ಣುಗಳ ಪ್ರದರ್ಶನ, ವಿವಿಧ ಹಣ್ಣು-ತರಕಾರಿ ತಳಿಗಳ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವದ ಅರಿವು ಪ್ರದರ್ಶನ, ರೈತಾಪಿ ವರ್ಗ ಅಳವಡಿಸಿಕೊಳ್ಳಬಹುದಾದ ನೂತನ ತಂತ್ರಜ್ಞಾನ, ಅಲಂಕಾರಿಕ ಗಿಡಗಳನ್ನು ಬೆಳೆಸುವ ಉದ್ಯಾನವನ, ಕಲಾವಿದನ ಕೈಯಲ್ಲಿ ಬಳೆಗಳಿಂದ ಮೂಡಿದ್ದ ಲಿಂ.ಡಾ.ಶ್ರೀ.ಶಿವಕುಮಾರ ಸ್ವಾಮೀಜಿ ಕಲಾಕೃತಿ, ತೋಟಗಾರಿಕಾ ಪಿತಾಮಹ ಡಾ||ಎಂ.ಹೆಚ್.ಮರೀಗೌಡ ಅವರ ಪ್ರತಿಮೆಗೆ ಮಾಡಿದ್ದ ಅಲಂಕಾರ, ಹೂಗಳಿಂದ ಕಂಗೊಳಿಸುತ್ತಿದ್ದ ಆನೆ, ಜಿರಾಫೆ, ನವಿಲು, ಚಿಟ್ಟೆ, ಮರಗಿಡ ಬೆಳೆಸಿ ಕಾಡು, ವನ್ಯಜೀವಿ ರಕ್ಷಿಸಿ ಎಂಬ ಪರಿಕಲ್ಪನೆ, ಸ್ವಾಮಿ ವಿವೇಕಾನಂದರ ಮರಳಿನ ಕಲಾಕೃತಿ, ಸೆಲ್ಫೀ ಪಾಯಿಂಟ್ ಸೇರಿದಂತೆ 25ಕ್ಕೂ ಹೆಚ್ಚು ಬಗೆಯ 18 ಸಾವಿರ ಹೂವಿನ ಗಿಡಗಳು ಪ್ರದರ್ಶನದಲ್ಲಿದ್ದವು.

      ರೈತರು ಮತ್ತು ನಾಗರಿಕರಿಗೆ ಮಾಹಿತಿ ನೀಡಲು ತೋಟಗಾರಿಕೆ ಇಲಾಖೆಯಿಂದ 40 ಮಳಿಗೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳಿಂದ ಸುಮಾರು 120 ಕ್ಕೂ ಹೆಚ್ಚು ಮಳಿಗೆಗಳು ಹಾಗೂ ಸಂಜೆ ವೇದಿಕೆ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಕಲಾವಿದರಿಂದ ಸಂಗೀತ, ಭರತನಾಟ್ಯ ಮತ್ತು ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ನೃತ್ಯ ನೋಡುಗರನ್ನು ಕುತೂಹಲದ ಲೋಕಕ್ಕೆ ಒಯ್ಯುವಂತಿತ್ತು.

   ರೈತರಿಂದ ಮೆಚ್ಚುಗೆ :

      ಪ್ರದರ್ಶನದಲ್ಲಿ ದೇಶದ ಬೆನ್ನೆಲುಬು ರೈತನಿಗೆ ವಿಶೇಷ ಒತ್ತು ನೀಡಲಾಗಿತ್ತು. ಅತೀ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸುವುದೇಗೆ?, ಜೇನು ಕೃಷಿ ಅಳವಡಿಕೆ ಹೇಗೆ?, ಬೇಸಾಯದ ಕ್ರಮಗಳ ಮಾದರಿಗಳು, ನೀರು ಉಳಿಸಿ ಉತ್ತಮ ಬೆಳೆ ಬೆಳೆಯುವ ತಂತ್ರಜ್ಞಾನ, ತರಕಾರಿ ಬೆಳೆ ಬೆಳೆಯುವ ಕ್ರಮ, ತೆಂಗು ಪುನಶ್ಚೇತನ, ಒಂದು ಎಕರೆಯಲ್ಲಿ ಸಮಗ್ರ ಕೃಷಿ ಅಳವಡಿಕೆ, ಮಹಾತ್ಮ ಗಾಂಧಿ ನರೇಗಾದಲ್ಲಿ ಸಿಗುವ ಸೌಲಭ್ಯಗಳು ಸೇರಿದಂತೆ ತೋಟಗಾರಿಕಾ ಕ್ಷೇತ್ರದ ನಾನಾ ಮಾದರಿಗಳು ರೈತರ ಮೆಚ್ಚುಗೆಗೆ ಪಾತ್ರವಾಯಿತು.

      ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಫಲಪುಷ್ಪ ಪ್ರದರ್ಶನ ಮೂಡಿಬಂದಿತ್ತು. ರೈತರ ಕನಸನ್ನು ಸಾಕಾರಗೊಳಿಸುವ ಪ್ರದರ್ಶನ ಇದಾಗಿತ್ತು. ರೈತರಿಗೆ ತುಂಬಾ ಅನುಕೂಲವಾಗಿತ್ತು ಎಂದು ಬಾಳೆ ಕೃಷಿ ಅಳವಡಿಕೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದಿರುವ ಊರುಕೆರೆ ಷಣ್ಮುಖಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಅನ್ನದಾತರಿಗೆ ತರಬೇತಿ:

      ಹನಿನೀರಾವರಿ ಘಟಕದ ತಾಂತ್ರಿಕ ಅಳವಡಿಕೆ ನಿರ್ವಹಣೆ ಹಾಗೂ ಖುಷ್ಕಿ ಬೇಸಾಯ ಪದ್ಧತಿ ಬಗ್ಗೆ ಕೆವಿಕೆ ವಿಜ್ಞಾನಿ ಡಾ.ನಾಗಪ್ಪ ದೇಸಾಯಿ, ಸುಧಾರಿತ ಬೇಸಾಯ ಪದ್ಧತಿ ಕುರಿತು ಅಖಿಲ ಭಾರತೀಯ ತೆಂಗು ಸಮನ್ವಯ ಯೋಜನೆ ತೋಟಗಾರಿಕೆ ಸಂಶೋಧನಾ ಕೇಂದ್ರ ಮುಖ್ಯಸ್ಥ ಡಾ.ಆರ್.ಸಿದ್ದಪ್ಪ, ಜೇನುಕೃಷಿ ಕುರಿತು ಜಗದೀಶ್ ಸೇರಿದಂತೆ ಕೃಷಿ ತಜ್ಞರು ಹಾಗೂ ವಿಜ್ಞಾನಿಗಳಿಂದ ರೈತರಿಗೆ ತರಬೇತಿ, ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ನಡೆಸಲಾಯಿತು. ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಆಗಮಿಸಿದ್ದ ರೈತರು ಕಾರ್ಯಗಾರದಲ್ಲಿ ಕೃಷಿಯ ಬಗ್ಗೆ ಮಾಹಿತಿ ಪಡೆದರು.

ಶಾಲಾ-ಕಾಲೇಜು ಮಕ್ಕಳಿಂದಲೂ ವೀಕ್ಷಣೆ :

      ಕೈಬೀಸಿ ಕರೆಯುತ್ತಿದ್ದ ಫಲಪುಷ್ಪ ಪ್ರದರ್ಶನಕ್ಕೆ ವಯಸ್ಸಿನ ಹಂಗಿರಲಿಲ್ಲ. ಮಕ್ಕಳಿಂದ ಹಿಡಿದು ವಯಸ್ಕರನ್ನೂ ತನ್ನತ್ತ ಸೆಳೆದಿತ್ತು. ಯುವಕ ಯುವತಿಯರಂತೂ ಹೂಗಳ ಆಕರ್ಷಣೆಗೆ ಮನಸೋತಿದ್ದರು. ವಿವಿಧ ಶಾಲಾ ಮಕ್ಕಳನ್ನು ಶಿಕ್ಷಕರು ಕರೆತಂದು ಪ್ರದರ್ಶನ ವೀಕ್ಷಿಸಲಾಯಿತು. ರಾತ್ರಿ ಸಮಯವಂತೂ ಕುಟುಂಬವೇ ಪ್ರದರ್ಶನದಲ್ಲಿ ನೆರೆಯುತ್ತಿತ್ತು.

       ನಾಗರಿಕರ ಜೊತೆಗೆ ರೈತರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಫಲಪುಷ್ಪ ಪ್ರದರ್ಶನದಲ್ಲಿ ಜನಸಂದಣಿ ದಟ್ಟವಾಗಿತ್ತು. ವರ್ಷದಿಂದ ವರ್ಷಕ್ಕೆ ಪ್ರದರ್ಶನವು ಬೆಳವಣಿಗೆಯನ್ನು ಸಾಧಿಸುತ್ತಿದೆ. ಫಲಪುಷ್ಪ ಪ್ರದರ್ಶನ ನೋಡಲು ಬೆಂಗಳೂರಿಗೆ ಹೋಗಬೇಕಾಗಿತ್ತು. ಆದರೆ ಜನರಿಗೆ ಅನುಕೂಲವಾಗುವಂತೆ ನಮ್ಮ ಜಿಲ್ಲೆಯಲ್ಲೇ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

                         –    ಬಿ.ರಘು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು

 

(Visited 26 times, 1 visits today)

Related posts