ಬಿಜೆಪಿ ಅಭ್ಯರ್ಥಿ ಜಿಎಸ್‍ಬಿ ನಾಮಪತ್ರ ಸಲ್ಲಿಕೆ!

ತುಮಕೂರು:

      ರಾಜ್ಯದಲ್ಲಿ ಏ. 18 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಹಾಗೂ ಮಾಜಿ ಸಂಸದ ಜಿ.ಎಸ್. ಬಸವರಾಜು ಇಂದು ಮಧ್ಯಾಹ್ನ ತಮ್ಮ ಉಮೇದುವಾರಿಕೆಯನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅವರಿಗೆ ಸಲ್ಲಿಸಿದರು.

      ನಗರದ ಕಾಲ್ಟ್ಯಾಕ್ಸ್‍ನಲ್ಲಿರುವ ಶ್ರೀ ಸಿದ್ದಿವಿನಾಯಕ ದೇವಾಲಯಕ್ಕೆ ಮಾಜಿ ಸಚಿವರಾದ ವಿ. ಸೋಮಣ್ಣ, ಮಾಜಿ ಶಾಸಕ ಬಿ.ಸುರೇಶ್‍ಗೌಡ, ಸೊಗಡು ಶಿವಣ್ಣ, ಶಾಸಕರಾದ ಜೆ.ಸಿ. ಮಾಧುಸ್ವಾಮಿ, ಜಿ.ಬಿ. ಜ್ಯೋತಿಗಣೇಶ್, ಬಿ.ಸಿ. ನಾಗೇಶ್ ಸೇರಿದಂತೆ ಕಾರ್ಯಕರ್ತರೊಂದಿಗೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಸಿದ್ದಿವಿನಾಯಕನಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

      ನಂತರ ಸಿದ್ದಿವಿನಾಯಕ ದೇವಾಲಯದಲ್ಲಿ ವಿವಿಧ ಜಾನಪದ ಕಲಾ ತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಅಪಾರ ಬೆಂಬಲಿಗರೊಂದಿಗೆ ಬೃಹತ್ ಮಟ್ಟದಲ್ಲಿ ಟೌನ್‍ಹಾಲ್ ವೃತ್ತ, ಎಂ.ಜಿ. ರಸ್ತೆ ಮುಖೇನ ಮೆರವಣಿಗೆಯಲ್ಲಿ ಸಾಗಿದ ಅಭ್ಯರ್ಥಿ ಜಿ.ಎಸ್. ಬಸವರಾಜು ಮಧ್ಯಾಹ್ನ 12.50 ಸುಮಾರಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

   ಶಕ್ತಿ ಪ್ರದರ್ಶನ:

      ನಿನ್ನೆಯಷ್ಟೇ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಹಾಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶನ ನಡೆಸಿದ್ದ ಬೆನ್ನಲ್ಲೆ ಇಂದು ಬಿಜೆಪಿ ನಾಯಕರು ಮೈತ್ರಿ ಪಕ್ಷಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ತಮ್ಮ ಶಕ್ತಿ ಪ್ರದರ್ಶಿಸಿದರು.

      ಈಗಾಗಲೇ ಮೂರು ಬಾರಿ ನಾಮಪತ್ರ ಸಲ್ಲಿಸಿರುವ ಜಿ.ಎಸ್. ಬಸವರಾಜು ಅವರು ಇಂದು ಪಕ್ಷದ ನಾಯಕರು, ಕಾರ್ಯಕರ್ತರೊಂದಿಗೆ ಮೈತ್ರಿ ಪಕ್ಷದ ವಿರುದ್ಧ ಶಕ್ತಿ ಪ್ರದರ್ಶನ ನಡೆಸುವ ಮೂಲಕ 4ನೇ ಬಾರಿಗೆ ಮತ್ತೊಮ್ಮೆ ನಾಮಪತ್ರ ಹಾಕಿದ್ದು ವಿಶೇಷವಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು ದೇಶಕ್ಕೆ ಮೋದಿ, ತುಮಕೂರಿಗೆ ಜಿಎಸ್‍ಬಿ, ಕರ್ನಾಟಕಕ್ಕೆ ಯಡಿಯೂರಪ್ಪ ಎಂಬ ಘೋಷಣೆಗಳನ್ನು ಕೂಗಿದರು.

(Visited 9 times, 1 visits today)

Related posts

Leave a Comment