ಭೂಮಿ ಸ್ವಾಧೀನ : ಪರಿಹಾರ ನೀಡದಿರುವುದನ್ನು ಖಂಡಿಸಿ ಪ್ರತಿಭಟನೆ

ಗುಬ್ಬಿ :

      ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 206 ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸ್ವಾಧೀನಪಡಿಸಿ ಕೊಳ್ಳುತ್ತಿರುವ ರೈತರ ಭೂಮಿ, ನಿವೇಶನ, ತೋಟಗಳು, ವಾಸದ ಮನೆಗಳಿಗೆ ಸೂಕ್ತವಾದ ಪರಿಹಾರ ನೀಡದಿರುವುದನ್ನು ಖಂಡಿಸಿ ತಾಲ್ಲೂಕಿನ ಮುದಿಗೆರೆ ಭಾಗದ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಕಾಮಗಾರಿ ನಡೆಸದಂತೆ ಜೆಸಿಬಿ ಯಂತ್ರಗಳನ್ನು ತಡೆದು ಪ್ರತಿಭಟನೆ ನಡೆಸಿದರು.

      ತಾಲ್ಲೂಕಿನ ಮುದಿಗೆರೆ ಗ್ರಾಮದ ಪಕ್ಕದಲ್ಲಿ ಹಾದು ಹೋಗುತ್ತಿರುವ ರಸ್ತೆ ಕಾಮಗಾರಿ ನಡೆಯುತ್ತಿರುವ ರೈತರ ಜಮೀನಿನಲ್ಲಿ ಜೆಸಿಬಿ ಯಂತ್ರವನ್ನು ತಡೆದು ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಸೂಕ್ತವಾದ ಪರಿಹಾರ ನೀಡುವವರೆಗೂ ಕಾಮಗಾರಿ ಮಾಡಬಾರದೆಂದು ಈ ಭಾಗದ ರೈತರು ರೈತ ಸಂಘದ ಮುಖಂಡರೊಂದಿಗೆ ಪ್ರತಿಭಟನೆ ನಡೆಸಿದರು.

      ರೈತ ಮಹದೇವಯ್ಯ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಸ್ವಾಧೀನ ಪಡಿಸಿಕೊಂಡಿರುವ ನಮ್ಮ ಭೂಮಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈವರೆಗೂ ಸೂಕ್ತವಾದ ಪರಿಹಾರ ನೀಡಿಲ್ಲ. ಅಲ್ಲದೆ ಯಾವುದೇ ಮಾಹಿತಿಯನ್ನು ನೀಡದೆ ಕಳೆದ ಹಲವು ವರ್ಷಗಳಿಂದ ಬೆಳೆಸಿದ್ದ ಮಾವಿನ ಮರಗಳನ್ನು ಕಡಿದು ರಸ್ತೆ ಕಾಮಗಾರಿಗೆ ಮುಂದಾಗಿದ್ದಾರೆ. ನಮಗೆ ಸೂಕ್ತವಾದ ಪರಿಹಾರ ನೀಡುವವರೆಗೂ ರಸ್ತೆ ಕಾಮಗಾರಿ ಕೆಲಸ ನಿರ್ವಹಿಸಲು ಬಿಡುವುದಿಲ್ಲ ಎಂದು ತಿಳಿಸಿದರು.

      ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಶೇಷ ಭೂಸ್ವಾಧೀನ ಅಧಿಕಾರಿಗಳು ರೈತರೊಂದಿಗೆ ನಡೆಸಿದ ಸಭೆ ವಿಫಲವಾಗಿತ್ತು. ಸಭೆಯಲ್ಲಿ ರೈತರ ಭೂಮಿಗೆ ಅತ್ಯಂತ ಕಡಿಮೆ ಮೊತ್ತದ ಪರಿಹಾರ ಘೋಷಣೆ ಮಾಡಲಾಗಿದೆ. ಇದು ರೈತರಿಗೆ ಮಾಡಿದ ಅನ್ಯಾಯವಾಗಿದೆ. ರಸ್ತೆ ನಿರ್ಮಾಣಕ್ಕಾಗಿ ರೈತರು ಶಾಶ್ವತವಾಗಿ ತಮ್ಮ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಭೂಮಿ ಕಳೆದುಕೊಳ್ಳುವುದರ ಜೊತೆಗೆ ತಮ್ಮ ಜೀವನಾಧಾರವಾಗಿದ್ದ ತೆಂಗು, ಮಾವು ಮುಂತಾದ ಮರಗಿಡಗಳನ್ನು ಕಳೆದುಕೊಳ್ಳುತ್ತಿದ್ದಾರೆ.

      ಹತ್ತು ಹಲವು ವರ್ಷಗಳಿಂದ ತಮ್ಮ ಜೀವನಾಧಾರಕ್ಕಾಗಿ ಕಷ್ಟಪಟ್ಟು ಬೆಳೆಸಿದ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ರೈತರ ಬೆಳೆಗಳಿಗೆ ಮತ್ತು ಭೂಮಿಗೆ ಸೂಕ್ತವಾದ ಪರಿಹಾರ ನೀಡದೆ ತಮ್ಮ ಇಚ್ಚೆಗೆ ಅನುಗುಣವಾಗಿ ಪರಿಹಾರ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದ್ದು ಸೂಕ್ತವಾದ ಪರಿಹಾರ ನೀಡುವವರೆಗೂ ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

      ರೈತ ಕೃಷಿ ಕಾರ್ಮಿಕ ಸಂಘದ ಅಧ್ಯಕ್ಷ ಸ್ವಾಮಿ ಮಾತನಾಡಿ, ರಸ್ತೆ ಅಭಿವೃದ್ಧಿಗಾಗಿ ಕಳೆದ ಹಲವು ವರ್ಷಗಳಿಂದ ತಮ್ಮ ಜೀವನಾ ಧಾರವನ್ನಾಗಿ ಮಾಡಿಕೊಂಡಿರುವ ಭೂಮಿಯ ಜೊತೆಗೆ ತೆಂಗು, ಅಡಿಕೆ ಮುಂತಾದ ಬೆಳೆಗಳನ್ನು ಕಳೆದುಕೊಳ್ಳುತ್ತಿರುವ ರೈತರಿಗೆ ಸೂಕ್ತವಾದ ಪರಿಹಾರ ನೀಡುವಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಫಲವಾಗಿದ್ದಾರೆ.

      ರೈತರಿಗೆ ಯಾವುದೇ ಮಾಹಿತಿ ನೀಡದೆ ರೈತರ ಜಮೀನಿನಲ್ಲಿ ಬೆಳೆಸಿದ್ದ ಮರಗಳನ್ನು ಗುತ್ತಿಗೆದಾರರು ಮನಬಂದಂತೆ ಕತ್ತರಿಸಿ ಹಾಕಿದ್ದಾರೆ. ಇದು ರೈತರಿಗೆ ಮಾಡಿದ ಅನ್ಯಾಯ. ರೈತರ ಭೂಮಿ ಮತ್ತು ಬೆಳೆಗಳಿಗೆ ಸೂಕ್ತವಾದ ಪರಿಹಾರ ನೀಡುವವರೆಗೂ ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ರೈತ ಸಂಘದ ಲೋಕೇಶ್, ಚನ್ನಬಸವಯ್ಯ, ಚಂದ್ರು, ಯತೀಶ್, ವೀರಭದ್ರಯ್ಯ ಸೇರಿದಂತೆ ಮುದಿಗೆರೆ ಭಾಗದ ರೈತರು ಭಾಗವಹಿಸಿದ್ದರು.

(Visited 12 times, 1 visits today)

Related posts

Leave a Comment