‘ಶಿಶುನಾಳ ಷರೀಫರಿಗೆ ಪರ್ಯಾಯ ಇಲ್ಲ’ – ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ

ತುಮಕೂರು:

      ಸಂತ ಶಿಶುನಾಳ ಷರೀಫರಿಗೆ ಇನ್ನೊಬ್ಬ ಪರ್ಯಾಯ ಸಾಧಕ ಇಲ್ಲ. ಅವರಿಗೆ ಅವರೇ ಸಾಟಿ ಎಂದು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

      ತುಮಕೂರು ವಿಶ್ವವಿದ್ಯಾನಿಲಯದ ಸಂತ ಶಿಶುನಾಳ ಷರೀಫರ ಅಧ್ಯಯನ ಕೇಂದ್ರವು ಹಮ್ಮಿಕೊಂಡಿದ್ದ ‘ಶಿಶುನಾಳ ಷರೀಫರ ಧೋರಣೆ ಮತ್ತು ಪ್ರೇರಣೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

      ಷರೀಫರು ಸಂತ ಶರಣ ಸೂಫಿಗಳ ಹಾದಿಯಲ್ಲಿ ಸಾಗಿದರು. ಎಲ್ಲರಿಗೂ ಮಾದರಿಯಾದರು. ಗಗನಕ್ಕೆ ಗಗನವೇ ಸಾಟಿ ಎಂಬಂತೆ ಷರೀಫರಿಗೆ ಷರೀಫರೇ ಸಾಟಿ, ಬೇರೊಬ್ಬರಿಲ್ಲ. ಇಂತಹ ದಾರ್ಶನಿಕನ ಹೆಸರಿನಲ್ಲಿ ಅಧ್ಯಯನ ಪೀಠ ಆರಂಭಿಸಿರುವುದು ಶ್ಲಾಘನೀಯ ಎಂದರು.

      ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂತ ಶಿಶುನಾಳ ಷರೀಫರ ಹಾಗೂ ಕಳಸದ ಗುರು ಗೋವಿಂದ ಭಟ್ಟರ ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಮಹೇಶ್‍ಜೋಷಿ ಮಾತನಾಡಿ, ಷರೀಫರು ನಡೆದು ಬಂದ ದಾರಿ ಮಹತ್ವಪೂರ್ಣದ್ದೆಂದು ಸ್ಮರಿಸಿದರು.

      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡರು ಶತಶತಮಾನಗಳ ಹಿಂದಿನಿಂದಲೂ ತಮ್ಮ ಮೌಲ್ಯಗಳನ್ನು ಕಟ್ಟಿಕೊಂಡು ಬಂದಿರುವ ಷರೀಫರು ಇಂದಿಗೂ ಪ್ರಸ್ತುತ. ಆ ಹಿನ್ನೆಲೆಯಲ್ಲಿ ಈ ಪೀಠ ಸ್ಥಾಪನೆಯಾಗಿರುವುದು ಔಚಿತ್ಯ ಪೂರಕವಾಗಿದೆ ಎಂದರು.

      ಪ್ರಾಸ್ತಾವಿಕವಾಗಿ ಮಾತನಾಡಿದ ಶಿಶುನಾಳ ಷರೀಫರ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಮೀನಾಕ್ಷಿ ಖಂಡಿಮಠ ಷರೀಫರ ಬದುಕಿನ ಸ್ವರೂಪಗಳನ್ನು ಇಂದಿನ ಸಮಾಜಕ್ಕೆ ಅಗತ್ಯ ಮತ್ತು ಅನಿವಾರ್ಯ. ಈ ದೃಷ್ಟಿಯಿಂದ ಸಂತ ಶಿಶುನಾಳ ಷರೀಫರ ಅಧ್ಯಯನ ಪೀಠವನ್ನು ಸ್ಥಾಪಿಸಿ ಆ ಮೂಲಕ ವಿಚಾರ ಸಂಕಿರಣ ಸಂಶೋಧನೆ ಅಧ್ಯಯನಾಂಗಗಳನ್ನು ತೆರೆಯುವುದು ನಮ್ಮ ಪೀಠ ಸ್ಥಾಪನೆಯ ಮುಂದಿನ ಆಶಯವಾಗಿದೆ ಎಂದರು.

      ಮೊದಲನೆ ಗೋಷ್ಠಿಯಲ್ಲಿ ಭಾಗವಹಿಸಿದ ಪ್ರೊ. ಬಸವರಾಜ ನೆಲ್ಲಿಸರ ಅವರು ಜಾನಪದೀಯ ಅಂಶಗಳನ್ನು ಜನಸಮುದಾಯಕ್ಕೆ ನೀಡಿದವರಲ್ಲಿ ಮುಖ್ಯರಾಗಿರುತ್ತಾರೆ. ಇದರ ಆಶಯದಂತೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದರು.

     ಡಾ. ಹಾ ಮಾ ನಾಗಾರ್ಜುನ ಮಾತನಾಡುತ್ತಾ ಸಂತ ಶಿಶುನಾಳ ಷರೀಫರು ಈ ಹೊತ್ತಿಗೆ ಪ್ರಸ್ತುತರಾಗಿರುವುದು ಅಂದಿನ ಅವರ ನಡೆ ನುಡಿಗಳು ಒಂದೇ ಆಗಿದ್ದು, ಪರಧರ್ಮ ಸಹಿಷ್ಣುತೆ ಆಧ್ಯಾತ್ಮಿಕತೆ ಲೌಕಿಕ ಆತ್ಮ ಕಥೆಗಳ ಸಂಗಮವನ್ನು ತತ್ವ ಪದ್ಧತಿಗಳಲ್ಲಿ ಕಟ್ಟಿಹಾಡಿದ್ದು, ಹೊಸ ಆಲೋಚನೆಯ ಕ್ರಮಗಳನ್ನು ವಿಸ್ತರಿಸಿಕೊಳ್ಳುವಲ್ಲಿ ಷರೀಫರ ತತ್ವಪದಗಳ ಆದರ್ಶ ಮತ್ತು ಆಶಯವಾಗಿದೆ ಎಂದರು.

      ಚಿಂತಕ ಮುರಳಿ ಕೃಷ್ಣಪ್ಪ ಮಾತನಾಡಿ “ವಿಷಯಾಸಕ್ತಿಯಿಂದ ಹೊರಬಂದಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ” ಎಂಬ ಮಾತುಗಳನ್ನು ಷರೀಫರು ಅನುಭವಗಮ್ಯವಾದ ವಿಚಾರಗಳನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನೋಡಿದ್ದಾರೆ. ಪರಮಾತ್ಮನಲ್ಲಿ ಸಾಯುಜ್ಯವನ್ನು ಹೊಂದಬೇಕೆಂಬ ನಿಲುವಿನ ಅತ್ಯಂತ ಯಶಸ್ವಿಯಾದ ವಿಚಾರವನ್ನು ಗುಡಿಯ ನೋಡಿರಣ್ಣ, ದೇಹದ ಗುಡಿಯ ನೋಡಿರಣ್ಣ ಎಂಬ ಮಾತಿನಿಂದ ತಿಳಿಸಿದ್ದಾರೆ ಎಂದರು.

(Visited 16 times, 1 visits today)

Related posts

Leave a Comment