ಡೆನ್ಮಾರ್ಕ್ ದೇಶದ ಅಲ್ಬೋರ್ಗ್ ಮಹಾನಗರದ ಮಾದರಿಯಲ್ಲಿ ತುಮಕೂರು ನಗರ ಅಭಿವೃದ್ಧಿಗೆ ಒತ್ತು

ತುಮಕೂರು :

       ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿ ತುಮಕೂರು ನಗರವನ್ನು ಡೆನ್ಮಾರ್ಕ್ ದೇಶದ ಅಲ್ಬೋರ್ಗ್ ಮಾದರಿಯಲ್ಲಿ ಅತ್ಯಾಧುನಿಕ ಮೂಲ ಡಿಜಿಟಲ್ ಸೌಕರ್ಯವಿರುವ ಮಹಾನಗರವನ್ನಾಗಿ ಅಭಿವೃದ್ಧಿಪಡಿಸಲು ಒತ್ತು ನೀಡಿ, ಯೋಜನೆ ಅನುಷ್ಠಾನ ಮತ್ತು ನಿರ್ವಹಣೆಯನ್ನು ಕಾರ್ಯ ನಿರ್ವಹಣೆ ಸಮಿತಿ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನಗರ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.

      ಡೆನ್ಮಾರ್ಕ್ ದೇಶದ ಕನ್ಸಲ್ಟೆಂಟ್ ಮುಖ್ಯಸ್ಥರಾಗಿರುವ ಜೆಟ್ಟೆ ಬೆಜ್ರೆಮ್ ಅವರು ಇಂದು ನಗರದಲ್ಲಿರುವ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಕಚೇರಿಯಲ್ಲಿ ಡೆನ್ಮಾರ್ಕ್ ತಂಡ ಮತ್ತು ಕಾರ್ಯನಿರ್ವಾಹಣಾ ಸಮಿತಿ ಸಭೆಯ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನ ವಂಶಿಕೃಷ್ಣ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ಟಿ. ಭೂಬಾಲನ್ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

      ತುಮಕೂರು ತೆಂಗು ಬೆಳೆಯುವ ಕಲ್ಪತರ ನಾಡಾಗಿದ್ದು ಶಿಕ್ಷಣದ ಬೀಡಾಗಿದೆ. ಸ್ಮಾರ್ಟ್ ರಸ್ತೆ, ಸ್ಮಾರ್ಟ್ ಲೈಟ್, ಸ್ಮಾರ್ಟ್ ಡಿಜಿಟಲ್ ಶಿಕ್ಷಣ, ನೀರು ಸರಬರಾಜು, ಇ-ಆಡಳಿತ ಹಾಗೂ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಎಂದು ಆಯುಕ್ತರು ಸಭೆಗೆ ಮಾಹಿತಿ ನೀಡಿದರು.

       ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನ ವಂಶಿಕೃಷ್ಣ ಮಾತನಾಡಿ, ಜನರ ಆಸ್ತಿ, ಪ್ರಾಣ ರಕ್ಷಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವುದು, ಇಂಟಿಗ್ರೇಟೆಡ್ ಕಂಟ್ರೋಲ್ ಕೇಂದ್ರದಿಂದ ಸಾರಿಗೆ ನಿಯಂತ್ರಣ, ಮೂರು ಡ್ರೋಣ್‍ಗಳ ಮೂಲಕ ಕಾರ್ಯನಿರ್ವಹಿಸಲಾಗುತ್ತಿದೆ. ಮೂಲಭೂತ ಸೌಕರ್ಯಗಳ ಬಗ್ಗೆ ರಕ್ಷಣಾ ಇಲಾಖೆಯಿಂದ ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.

      ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಮಾತನಾಡಿ ತುಮಕೂರು ನಗರದಲ್ಲಿ 3.2 ಲಕ್ಷ ಜನಸಂಖ್ಯೆ, ಜಿಲ್ಲೆಯಾದ್ಯಂತ 27 ಲಕ್ಷ ಜನರಿದ್ದಾರೆ. ಜಿಲ್ಲೆಯಾದ್ಯಂತ ಕೇಂದ್ರ ಸ್ಥಾನದಿಂದಲೇ ಸುಧಾರಿತ ಆಡಳಿತವನ್ನು ನಿರ್ವಹಿಸಲು ಸ್ಮಾರ್ಟ್ ಸಿಟಿ ಯೋಜನೆ ಬಹಳ ಪರಿಣಾಮಕಾರಿಯಾಗಿದ್ದು, ಈ ಕಾರ್ಯವನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲು ಎಲ್ಲಾ ರೀತಿಯ ಸಹಕಾರ ಜಿಲ್ಲಾಡಳಿತದಿಂದ ನೀಡಲಾಗುವುದೆಂದು ಅವರು ತಿಳಿಸಿದರು.

      ಆಯುಕ್ತರು ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು, ಇತಿಹಾಸ, ವಾಣಿಜ್ಯ, ರಸ್ತೆ ಸಂಪರ್ಕ, ಕೈಗಾರಿಕೆ ಅಭಿವೃದ್ಧಿಗೆ ಇರುವ ಸೌಕರ್ಯ ಮತ್ತು ಸಂಪನ್ಮೂಲ ಹಾಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಯಾದ ಸಿದ್ದಗಂಗಾ ಮಠದ ಕುರಿತು ಮತ್ತು ಶಿಕ್ಷಣದ ಪಕ್ಷಿನೋಟವನ್ನು ಡೆನ್ಮಾರ್ಕ್ ತಂಡದವರಿಗೆ ವಿವರಿಸಿದರು. ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರವಿರುವ ತುಮಕೂರು ನಗರದ ಇತಿಹಾಸ, ಶೈಕ್ಷಣಿಕ ಪ್ರಗತಿಯಿಂದ ಹಾಗೂ ಸಿದ್ಧಗಂಗಾ ಮಠದ ಪರಂಪರೆಯಿಂದ ವಿಶ್ವದಾದ್ಯಂತ ಖ್ಯಾತಿ ಗಳಿಸಿದ ನಗರವಾಗಿದೆ. ಈ ನಗರವನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ರಸ್ತೆ, ಬೀದಿದೀಪ, ಡಿಜಿಟಲ್ ಶಿಕ್ಷಣಕ್ಕಾಗಿ ಮತ್ತು ನಿರಂತರ 24*7 ನೀರು ಸರಬರಾಜು, ನೀರಿನ ಪುನರ್ಬಳಕೆ, ತ್ಯಾಜ್ಯ ನಿರ್ವಹಣೆ, ಪಾವಗಡದಲ್ಲಿರುವ ಸೋಲಾರ್ ಪಾರ್ಕ್, ವಸಂತನರಸಾಪುರದಲ್ಲಿರುವ ಫುಡ್ ಪಾರ್ಕ್, ಕೈಗಾರಿಕಾ ಪ್ರದೇಶಾಭಿವೃದ್ಧಿ ನಡೆಯುತ್ತಿದ್ದು, 37 ದೊಡ್ಡ ಪ್ರಮಾಣದ ಹಾಗೂ 27322 ಮಧ್ಯಮ ಪ್ರಮಾಣದ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿದ್ದು, ನಾಸಾ, ಇಸ್ರೋ, ಎಚ್‍ಎಎಲ್ ಮತ್ತು ಹೂವು ಹರಾಜು ಕೇಂದ್ರ ಸ್ಥಾಪಿಸಲು ಕಾರ್ಯ ಯೋಜನೆ ರೂಪಿಸಿದೆ. ಈ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ ಜನರಿಗೆ ಈ ಯೋಜನೆಯ ಲಾಭ ಸಿಗುವಂತೆ ಮಾಡುವುದು ಸ್ಮಾರ್ಟ್ ಸಿಟಿಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

      ಕರ್ನಾಟಕ ರಾಜ್ಯದ 7 ನಗರಗಳನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಆಯ್ಕೆ ಮಾಡಿದ್ದು, ತುಮಕೂರು ನಗರವು ರಾಜಧಾನಿ ಬೆಂಗಳೂರಿಗೆ ಹತ್ತಿರವಿರುವುದರಿಂದ ಇನ್ನೂ ಅತ್ಯಾಧುನಿಕ ಮೂಲ ಸೌಕರ್ಯಗಳುಳ್ಳ ನಗರ ಇದಾಗಲಿದೆ. 48 ಚದರ ಕಿ.ಮೀನಲ್ಲಿ ವ್ಯಾಪಿಸಿರುವ ತುಮಕೂರು ನಗರವನ್ನು ಪಬ್ಲಿಕ್ ಪ್ರೈವೇಟ್ ಪಾರ್ಟ್‍ನರ್‍ಶಿಪ್‍ನಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

      ಡೆನ್ಮಾರ್ಕ್‍ನ ಅಲ್ಬೋರ್ಗ್ ಸ್ಮಾರ್ಟ್‍ಸಿಟಿ ನಗರ ಸಲಹೆಗಾರರಾದ ಜೆಟ್ಟೆ ಬೆಜ್ರೆಮ್ ಮಾತನಾಡಿ, ಮೊದಲಿಗೆ ರಸ್ತೆ, ಶಿಕ್ಷಣ, ಆರೋಗ್ಯ, ಡಿಜಿಟಲ್ ಲೈಬ್ರರಿ, ಕುಡಿಯುವ ನೀರು, ಇ-ಆಡಳಿತ, ಗುಂಪುಮನೆ ಯೋಜನೆ, ಗ್ರೀನ್‍ಪಾರ್ಕ್, ಘನತ್ಯಾಜ್ಯ ನಿರ್ವಹಣೆ, ನೀರಿನ ಪುನರ್ಬಳಕೆ, ಏರ್‍ಪೋರ್ಟ್, ಪ್ರವಾಸೋದ್ಯಮ ಅಭಿವೃದ್ಧಿ, ವಾಣಿಜ್ಯ ಮತ್ತು ವ್ಯವಹಾರಗಳ ಹೂಡಿಕೆಗೆ ಅವಕಾಶ ಕಲ್ಪಿಸುವುದು ಯೋಜನೆಯ ಮುಖ್ಯ ಉದ್ದೇಶ. ಸುಂದರ ಮತ್ತು ಸ್ವಚ್ಛ ನಗರವಾಗಿ ಅತ್ಯಾಧುನಿಕ ಮೂಲ ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲು ಬೇಕಾಗುವ ಎಲ್ಲಾ ತಾಂತ್ರಿಕ ಆಡಳಿತಾತ್ಮಕ ಮತ್ತು ಹಣಕಾಸಿನ ನಿರ್ವಹಣೆ ಬಗ್ಗೆ ಸಲಹೆ ನೀಡಲು ಡೆನ್ಮಾರ್ಕ್ ದೇಶದೊಂದಿಗೆ ಒಪ್ಪಂದದ ರೀತಿಯಲ್ಲಿ ಕಾರ್ಯಯೋಜನೆ ಅನುಷ್ಠಾನಗೊಳಿಸಲು ಎಲ್ಲರ ಸಹಕಾರ ಬಹಳ ಮುಖ್ಯವಾಗಿದೆ. ಜನರ ಜೀವನಮಟ್ಟ ಸುಧಾರಣೆಗೆ ಸ್ಮಾರ್ಟ್‍ಸಿಟಿ ಯೋಜನೆ ಬಹು ಉಪಯುಕ್ತವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಮಿತಿ ಕಾರ್ಯನಿರ್ವಹಿಸಬೇಕೆಂದು ಅವರು ಸಲಹೆ ನೀಡಿದರು.
ಜ್ಞಾನದ ವಿನಿಮಯ, ಅಧ್ಯಯನ ಪ್ರವಾಸ ಹಾಗೂ ಕಾರ್ಯಾಗಾರಗಳ ಆಯೋಜನೆ, ಉನ್ನತ ಮಟ್ಟದ ಪ್ರತಿನಿಧಿಗಳು ಎರಡು ನಗರಗಳನ್ನು ಪರಸ್ಪರ ಸಂದರ್ಶಿಸುವುದು. ಅಲ್ಬೋರ್ಗ್ ನಗರವು ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ಯೋಜನೆಗಳಿಗಾಗಿ ಆರ್ಥಿಕ ಸಹಾಯವನ್ನು ಒದಗಿಸುವ ಸಂಭಾವ್ಯ ಮೂಲಗಳನ್ನು ಗುರುತಿಸಲು ಸಹಕಾರ ನೀಡಲಿದೆ ಎಂದು ಅವರು ತಿಳಿಸಿದರು.

      ನಂತರ ತಂಡವು ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿಜಿಟಲ್ ಇಂಟಿಗ್ರೇಟೆಡ್ ಕಂಟ್ರೋಲ್ ರೂಂ, ಡಿಜಿಟಲ್ ಲೈಬ್ರರಿ, ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಡಿಜಿಟಲ್ ಕ್ಲಾಸ್ ರೂಂ ಮತ್ತುಅಮಾನಿಕೆರೆಯಲ್ಲಿರುವ ಸ್ಮಾರ್ಟ್‍ಸಿಟಿ ಲಾಂಜ್ ಹಾಗೂ ಆಧುನಿಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕಾಮಗಾರಿಗಳ ವೀಕ್ಷಣೆ ಮತ್ತು ಕಾರ್ಯನಿರ್ವಹಣೆ ಬಗ್ಗೆ ತಂಡವು ಮಾಹಿತಿ ಪಡೆಯಿತು.

      ತಂಡದೊಂದಿಗೆ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಪಾಲಿಕೆ ಮೇಯರ್ ಫರೀದಾ ಬೇಗಂ, ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಟಿ.ಭೂಬಾಲನ್, ಸ್ಮಾರ್ಟ್‍ಸಿಟಿ ಯೋಜನೆಯ ಕಾರ್ಯನಿರ್ವಹಣಾ ಸಮಿತಿಯ ತಾಂತ್ರಿಕ ಮುಖ್ಯಸ್ಥರಾದ ಪಿ.ಕೆ. ಶೈನಿ, ಯೋಜನಾ ವ್ಯವಸ್ಥಾಪಕರು ಸಹನವಾಜ್, ವ್ಯವಸ್ಥಾಪಕ ನಿರ್ದೇಶಕ (ಆಡಳಿತ) ಪಿ.ಎನ್. ಸ್ವಾಮಿ, ಡೆನ್ಮಾರ್ಕ್‍ನ ಕಾನ್ಸುಲೆಟ್ ಜನರಲ್‍ನ ಟ್ರೇಡ್ ಕೌನ್ಸಿಲರ್ ಜಿ.ವಿ. ಪ್ರಶಾಂತ್, ವಾಣಿಜ್ಯ ಸಲಹೆಗಾರರಾದ ಎಂ.ಎಸ್. ಸುರೇಶ್, ಟ್ರೇಡ್ ಆಫಿಸರ್ ಜೆ. ಮೋಹನ್ ಕುಮಾರ್, ಜೋಸೆಫ್ ಸೇರಿದಂತೆ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ಇಂಜಿನಿಯರುಗಳು ಭಾಗವಹಿಸಿದ್ದರು.

(Visited 15 times, 1 visits today)

Related posts

Leave a Comment