ಸಾಮರಸ್ಯದ ಕೊರತೆ: ಕಾಮಗಾರಿ ವಿಳಂಬ

 ತುಮಕೂರು:

      ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ನಡುವೆ ಇರುವ ಸಾಮರಸ್ಯದ ಕೊರತೆಯಿಂದ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳಲು ವಿಳಂಬವಾಗುತ್ತಿದೆ ಎಂದು ತುಮಕೂರು ಸ್ಮಾರ್ಟ್ ಸಿಟಿ ಯೋಜನೆ ಅಧ್ಯಕ್ಷೆ ಡಾ: ಶಾಲಿನಿ ರಜನೀಶ್ ಬೇಸರ ವ್ಯಕ್ತಪಡಿಸಿದರು.

      ನಗರದ ಬಾರ್‍ಲೈನ್ ರಸ್ತೆಯಲ್ಲಿಂದು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಸಿಸಿ ರಸ್ತೆ, ಚರಂಡಿ ಹಾಗೂ ಪಾದಚಾರಿ ಮಾರ್ಗ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಅಧಿಕಾರಿಗಳಿಗೆ ಸೂಚನೆ ನೀಡುತ್ತಾ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಪಾಲಿಕೆಯಲ್ಲಿರುವ ನಗರದ ನಕ್ಷೆಯನ್ನು ಅವಲೋಕಿಸಿದ ನಂತರ ಕಾಮಗಾರಿಗಳನ್ನು ಯೋಜಿತ ರೀತಿಯಲ್ಲಿ ಕೈಗೊಳ್ಳಬೇಕು ಎಂದು ತಿಳಿಸಿದರು.

      ಸಿಸಿ ರಸ್ತೆಯೊಂದನ್ನು ಪರಿಶೀಲಿಸುತ್ತಾ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ಚರಂಡಿ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಕ್ರಮ ಸರಿಯಲ್ಲ. ಇದರಿಂದ ಯೋಜನೆಯ ಹಣ ಪೋಲಾಗುತ್ತದೆಯಲ್ಲದೆ ಕಾಮಗಾರಿಯನ್ನು ದೀರ್ಘ ಕಾಲ ಕೈಗೊಳ್ಳುವುದರಿಂದ ಜನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ ಎಂದು ತಿಳಿಸಿದರು.

      ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 82 ಸ್ಮಾರ್ಟ್ ರಸ್ತೆಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, 4 ರಸ್ತೆಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಯಾವುದೇ ಕಾಮಗಾರಿ ಕೈಗೊಂಡಲ್ಲಿ ಏಜೆನ್ಸಿವಾರು ವೇಳಾ ಪಟ್ಟಿಯನ್ನು ಪ್ರತಿದಿನ ಶಾಸಕರ ಗಮನಕ್ಕೆ ತರಬೇಕು ಎಂದರು.

      ಚಿಲುಮೆ ಸಮುದಾಯ ಭವನದ ಬಳಿ ಚರಂಡಿ ಕಾಮಗಾರಿ ಪರಿಶೀಲಿಸಿದ ಅವರು, ನಿಯಮಾವಳಿ ಪ್ರಕಾರ ನಿಗಧಿತ ಅಳತೆಯಲ್ಲಿಯೇ ಚರಂಡಿ, ಪಾದಚಾರಿ ಮಾರ್ಗ, ಸೈಕಲ್ ಟ್ರ್ಯಾಕ್ ಒಳಗೊಂಡ ರಸ್ತೆಯನ್ನು ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಸ್ಮಾರ್ಟ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಆಗಬಹುದಾದ ಸಾಧಕ-ಬಾಧಕಗಳ ಬಗ್ಗೆ ಸಂಬಂಧಿಸಿದ ವಾರ್ಡಿನ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿ ಚರ್ಚಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

      ಈ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ಪಾಲಿಕೆ ಆಯುಕ್ತ ಭೂಬಾಲನ್, ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ, ಮುಖ್ಯ ಇಂಜಿನಿಯರ್ ಡಾ: ಶಾಂತರಾಜಣ್ಣ, ಮತ್ತಿತರರು ಉಪಸ್ಥಿತರಿದ್ದರು.

(Visited 33 times, 1 visits today)

Related posts