ವೇಮನ ತತ್ವಾದರ್ಶಗಳನ್ನು ಅಳವಡಿಸಿಕೊಂಡಾಗ ಬದುಕು ಸಾರ್ಥಕ

 ತುಮಕೂರು:

      ಜೀವನದಲ್ಲಿ ವೇಮನ ತತ್ವಾದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಸಂಸದ ಎಸ್.ಪಿ ಮುದ್ದಹನುಮೇಗೌಡ ಅಭಿಪ್ರಾಯಪಟ್ಟರು.

      ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜಿಲ್ಲಾ ರೆಡ್ಡಿ ಜನಸಂಘಗಳ ಸಹಯೋಗದಲ್ಲಿಂದು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೇಮನರು 15ನೇ ಶತಮಾನದಲ್ಲಿಯೇ ಸಮಾಜವನ್ನು ತಿದ್ದಿ-ತೀಡಿ ಸರಿದಾರಿಗೆ ತಂದ ಮಹಾ ದಾರ್ಶನಿಕರು. ನಾವಿಂದು ಆಧುನಿಕತೆಯ ತುತ್ತ ತುದಿಯಲ್ಲಿದ್ದರೂ, ವೈಜ್ಞಾನಿಕವಾಗಿ ಮುಂದುವರೆದಿದ್ದರೂ ಇವರ ಚಿಂತನೆಗಳು ಇಂದಿಗೂ ಮಾನ್ಯವಾಗಿವೆ. ಸಾಮಾನ್ಯ ಜ್ಞಾನದ ಮೂಲಕವೇ ಡಾಂಭಿಕತೆ, ಯೋಗ, ಕುಟುಂಬ, ಧರ್ಮ-ಅಧರ್ಮ, ಜ್ಞಾನ-ಅಜ್ಞಾನ, ಮುಕ್ತಿ ಮಾರ್ಗ, ಸದ್ಗತಿ ಸೇರಿದಂತೆ ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳುವ ಕುರಿತು 4000ಕ್ಕಿಂತ ಹೆಚ್ಚು ಪದ್ಯಗಳನ್ನು ರಚಿಸುವ ಮೂಲಕ ತೆಲುಗಿನ ಸರ್ವಜ್ಞನೆನಿಸಿಕೊಂಡಿದ್ದಾರೆ. ಇವರ ಸಾಮಾಜಿಕ ಸುಧಾರಣಾ ತತ್ವ, ವಚನಾಮೃತಗಳು ಇಂದಿಗೂ ಪ್ರಸ್ತುತ. ಈಗಲೂ ವೇಮನರ ವಿಚಾರಗಳು ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ಸಂಸ್ಕøತಿಯಲ್ಲಿ ಜೊತೆ ಜೊತೆಯಾಗಿ ಸಾಗುತ್ತಿವೆ ತಿಳಿಸಿದರು. 

      ಪಾಸ್ ಪೋರ್ಟ್ ಕಚೇರಿ, ಇಸ್ರೋ, ಹೆಚ್‍ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ, ಸ್ಮಾರ್ಟ್ ಸಿಟಿ, ಸೋಲಾರ್ ಪಾರ್ಕ್, ವಸಂತ ನರಸಾಪುರ ಕೈಗಾರಿಕಾ ಪ್ರದೇಶಗಳಿಂದ ತುಮಕೂರು ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಕೇಂದ್ರದ ಅನುದಾನದಡಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ 4000ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದರಲ್ಲದೆ ಕಳೆದ ಜಯಂತಿ ಸಂದರ್ಭದಲ್ಲಿ ಭರವಸೆ ನೀಡಿದಂತೆ ರೆಡ್ಡಿ ಸಮುದಾಯದ ವಸತಿ ನಿಲಯ ನಿರ್ಮಾಣಕ್ಕಾಗಿ ಸಂಸದರ ನಿಧಿಯಿಂದ 5ಲಕ್ಷ ರೂ.ಗಳನ್ನು ಈಗಾಗಲೇ ನೀಡಿ ಮಾತು ಉಳಿಸಿಕೊಂಡಿದ್ದೇನೆ ಎಂದು ತಿಳಿಸಿದರು.

      ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್ ರೆಡ್ಡಿ ಜನಾಂಗ ಬಲಿಷ್ಠವಾಗಿದ್ದು, ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಂದಿನ ಯುವಕರು ಅಡ್ಡದಾರಿ ಹಿಡಿದು ಬಹುಬೇಗ ಜಿಗುಪ್ಸೆಗೊಳಗಾಗಿ ಆಸ್ಪತ್ರೆ, ಆಶ್ರಮ ಸೇರುತ್ತಿರುವುದು ವಿಷಾದದ ಸಂಗತಿ. ಚಿಕ್ಕವಯಸ್ಸಿನಲ್ಲಿಯೇ ಮಾನಸಿಕ ಖಿನ್ನತೆಗೊಳಗಾಗುವವರಿಗೆ ವೇಮನರ ಸಂದೇಶಗಳು ಸರಿದಾರಿ ತೋರುತ್ತವೆ. ಪೋಷಕರೂ ಸಹ ತಮ್ಮ ಮಕ್ಕಳನ್ನು ಉತ್ತಮ ದಾರಿಯಲ್ಲಿ ನಡೆಯುವಂತೆ  ಮಾರ್ಗದರ್ಶನ ನೀಡಬೇಕು ಎಂದು ಕಿವಿ ಮಾತು ಹೇಳಿದರು.

       ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಮಾತನಾಡಿ ವಾಸ್ತವದ ನೆಲೆಯಲ್ಲಿ ಬದುಕುವುದು ಕಷ್ಟ. ವೇಮನರ ನೀತಿ ಮಾತುಗಳನ್ನು ಜೀವನದಲ್ಲಿ ಅನುಸರಿಸಿದಲ್ಲಿ ಮುಕ್ತಿ ಮಾರ್ಗ ದೊರೆಯುತ್ತದೆ ಎಂದು ತಿಳಿಸಿದ ಅವರು ತುಮಕೂರಿನಲ್ಲಿ ಯಾವುದಾದರೊಂದು ಉದ್ಯಾನವನಕ್ಕೆ ವೇಮನರ ಹೆಸರನ್ನು ನಾಮಕರಣ ಮಾಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ ಅವರು ಉಪನ್ಯಾಸ ನೀಡುತ್ತಾ ವೇಮನರ ತ್ರಿಪದಿ, ಚೌಪದಿಗಳು ಜೀವನಾನುಭವಗಳನ್ನು ಚಿತ್ರಿಸಿಕೊಡುತ್ತವೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ಇವರು ಹೇಳದಿರುವ ವಿಷಯಗಳಿಲ್ಲ. ಇವರ ವಚನಗಳು ಆತ್ಮಸಿದ್ಧಿಯೊಂದಿಗೆ ಲೋಕಶುದ್ಧಿಯನ್ನು ಸಾರುತ್ತವೆ ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಹಾಗೂ ಇಂಜಿನಿಯರಿಂಗ್ ಪದವಿಯಲ್ಲಿ ಹೆಚ್ಚಿನ ಅಂಕ ಗಳಿಸಿ ಆರು ಚಿನ್ನದ ಪದಕಗಳನ್ನು ಪಡೆದಿರುವ ಪ್ರತಿಭಾನ್ವಿತೆ ದಿವ್ಯ ರೆಡ್ಡಿ ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.99 ಅಂಕ ಪಡೆದ ಜಿ.ಸಿ.ವರ್ಷ ಅವರನ್ನು ಪುರಸ್ಕರಿಸಲಾಯಿತು. ಸಮುದಾಯಕ್ಕಾಗಿ ಶ್ರಮಿಸಿದ ನಿವೃತ್ತ ಎ.ಇ.ಇ ಗೋವಿಂದ ರೆಡ್ಡಿ, ನಿವೃತ್ತ ಆರ್.ಟಿ.ಒ ಕೃಷ್ಣ ರೆಡ್ಡಿ, ಕರ್ನಾಟಕ ರಾಜ್ಯ ವ್ಯವಸಾಯೋತ್ಪನ್ನ ಮಾರುಕಟ್ಟೆ ಮಾಜಿ ನಿರ್ದೇಶಕ ಎಸ್.ಕೆ.ರೆಡ್ಡಿ, ನಿವೃತ್ತ ಪ್ರಾಚಾರ್ಯ ವೆಂಕಟರಂಗಾರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

      ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಆಪಿನಕಟ್ಟೆ, ಜಿಲ್ಲಾ ರೆಡ್ಡಿ ಜನಸಂಘ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಉಪಾಧ್ಯಕ್ಷ ಬಿ.ಆರ್.ಮಧು ಪಾಲಿಕೆಯ ನಾಗೇಶ್ ಕುಮಾರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

(Visited 33 times, 1 visits today)

Related posts

Leave a Comment