ಹುಳಿಯಾರು: ವರ್ಷ ಕಳೆದರೂ ಪಾವತಿಯಾಗದ ರಾಗಿ ಹಣ

ಹುಳಿಯಾರು:

      ಜನವರಿ 16 ರಿಂದ ಪ್ರಸಕ್ತ ಸಾಲಿನ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಆದರೆ ಕಳೆದ ವರ್ಷ ಖರೀದಿಸಿದ್ದ ರಾಗಿಗೆ ಹಣ ನೀಡದೆ ಸತಾಯಿಸುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

     ಹೌದು ಕಳೆದ ವರ್ಷ ಸರ್ಕಾರ 3150 ರೂ. ಬೆಂಬಲ ಬೆಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ರೈತರಿಂದ 50850 ಕ್ವಿಂಟಲ್ ರಾಗಿ ಖರೀದಿಸಿತ್ತು. ಇದರ ಬಾಬ್ತು ಹಣವನ್ನು ಕೊವಿಡ್ ಸಂದರ್ಭದಲ್ಲಿ ಪಾವತಿಸಿ ಸಂಕಷ್ಟದಲ್ಲಿದ್ದ ರೈತರಿಗೆ ನೆರವಾಗಿತ್ತು. ಉಳಿದ ರೈತರಿಗೆ ನಂತರದ ದಿನಗಳಲ್ಲಿ ಪಾವತಿಸಿತ್ತು. ಆದರೆ ಇವರಲ್ಲಿ 18 ಮಂದಿ ರೈತರಿಗೆ ಮಾತ್ರ ಹಣ ಪಾವತಿ ಮಾಡದೆ ನಿರ್ಲಕ್ಷ್ಯಿಸಿತ್ತು. ಪರಿಣಾಮ ವರ್ಷದಿಂದ ಈ ರೈತರು ತಮ್ಮ ಪಾಲಿನ ಹಣಕ್ಕಾಗಿ ಅಲೆಯುವಂತ್ತಾಗಿದೆ.

       ಹಣ ಪಾವತಿಯಾಗದ ರೈತರ ಅಕೌಂಟ್ ಮತ್ತು ಆಧಾರ್ ಕಾರ್ಡ್ ಮ್ಯಾಚ್ ಆಗದೆ ಪೇಮೆಂಟ್ ರಿಟರ್ನ್ ಆಗಿದೆ ಎಂಬುದು ಅಧಿಕಾರಿಗಳ ಸಬೂಬು. ಹಾಗಾಗಿ ರೈತರು ತಮ್ಮ ಖಾತೆಯ ಬ್ಯಾಂಕ್‍ಗಳಿಗೆ ತೆರಳಿ ಲಿಂಕ್ ಮಾಡಿಸಿ ಮತ್ತೊಮ್ಮೆ ದಾಖಲಾತಿ ಕೊಟ್ಟಿದ್ದಾರೆ. ಆದರೂ ಆಹಾರ ನಿಗಮದ ಅಧಿಕಾರಿಗಳು ಸ್ಪಂಧಿಸದೆ ನಿರ್ಲಕ್ಷ್ಯಿಸುತ್ತಿದ್ದಾರೆ. ಖರೀದಿ ಕೇಂದ್ರದ ಅಧಿಕಾರಿಗಳು ಸ್ಥಳೀಯವಾಗಿ ಲಭ್ಯವಾಗದ ಪರಿಣಾಮ ತುಮಕೂರಿಗೂ, ಬೆಂಗಳೂರಿಗೂ ತಿರುಗುವಂತ್ತಾಗಿದೆ ಎಂಬುದು ರೈತರ ಆರೋಪವಾಗಿದೆ.

       ಈಗ ಪ್ರಸಕ್ತ ಸಾಲಿನ ರಾಗಿ ಖರಿದಿಗೆ ಸರ್ಕಾರ ಮುಂದಾಗಿದ್ದರೂ ಕಳೆದ ವರ್ಷದ ಖರೀದಿ ಹಣ ನೀಡದೆ ಸತಾಯಿಸಿರುವುದು ಆಹಾರ ನಿಗಮದ ಮೇಲೆ ರೈತರು ವಿಶ್ವಾಸ ಕಳೆದುಕೊಳ್ಳುವಂತ್ತಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ನ್ಯಾಯಯುತವಾಗಿ ಸಲ್ಲಬೇಕಿರುವ ರಾಗಿ ಹಣವನ್ನು ತಕ್ಷಣ ಬಿಡುಗಡೆ ಮಾಡಿ ವಿಶ್ವಾಸ ಉಳಿಸಿಕೊಳ್ಳಬೇಕಿದೆ.

(Visited 5 times, 1 visits today)

Related posts

Leave a Comment