ಪಶು ವೈದ್ಯೆ ಮೇಲೆ ಅತ್ಯಾಚಾರ : ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ

ತುಮಕೂರು:

     ತೆಲಂಗಾಣದಲ್ಲಿ ಪಶುವೈದ್ಯೆ ಡಾ.ಪ್ರಿಯಾಂಕರೆಡ್ಡಿ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ, ಕರ್ನಾಟಕ ಪಶುವೈದ್ಯಕೀಯ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ತೆಲಂಗಾಣ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

      ಈ ವೇಳೆ ಮಾತನಾಡಿದ ಕರ್ನಾಟಕ ಪಶುವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಡಾ.ರುದ್ರಪ್ರಸಾದ್ ಅವರು, ಪ್ರಿಯಾಂಕ ರೆಡ್ಡಿ ಮೇಲೆ ನಡೆಸಿರುವ ಅತ್ಯಾಚಾರ ಘಟನೆಯಿಂದಾಗಿ, ಪಶುವೈದ್ಯರು ಮಾನಸಿಕವಾಗಿ ಕುಗ್ಗಿದ್ದಾರೆ. ಹಳ್ಳಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ವಿಶ್ವಾಸದ ಮೇಲೆ ಚಿಕಿತ್ಸೆಗೆಂದು ತೆರಳುತ್ತಾರೆ, ಇಂತಹ ಘಟನೆಯಿಂದಾಗಿ ಹಳ್ಳಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯರು ಭಯಭೀತರಾಗಿದ್ದಾರೆ ಎಂದರು.

      ಸಿಸಿ ಕ್ಯಾಮರಾ ಇರುವ ಪ್ರದೇಶದಲ್ಲಿಯೇ ವೈದ್ಯೆಯ ಮೇಲೆ ಇಂತಹ ಕೃತ್ಯ ನೆಡೆದಿರುವುದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಇಂತಹ ಘಟನೆಗಳಿಂದ ಪಶುವೈದ್ಯರು ಕಾರ್ಯನಿರ್ವಹಿಸುವುದಕ್ಕೆ ಹಿಂಜರಿಯುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪಶುವೈದ್ಯರಲ್ಲಿ ಧೈರ್ಯ ಮೂಡಿಸುವಂತಹ ಹಾಗೂ ಸಮಾಜಕ್ಕೆ ನೈತಿಕ ಸ್ಥೈರ್ಯ ತುಂಬುವಂತೆ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

      ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ಪ್ರಕಾಶ್ ಮಾತನಾಡಿ, ಅತ್ಯಾಚಾರಿಗಳಿಗೆ ಕಾನೂನಿನ ಭಯ ಇಲ್ಲದಂತಾಗಿದ್ದು, ಸ್ವಾವಲಂಬನೆಯ ಜೀವನ ನಡೆಸುತ್ತಿರುವ ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡುವಂತಹ ಪರಿಸರ ಇಲ್ಲದಂತ ಪರಿಸ್ಥಿತಿ ಇದೆ. ಇಂತಹ ಘಟನೆಗಳು ಮಾನವ ಸಂಕುಲಕ್ಕೆ ಕಪ್ಪುಚುಕ್ಕೆಯಾಗಿದ್ದು, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಇಂದು ಪಶು ವೈದ್ಯಕೀಯ ಇಲಾಖೆಗಳಲ್ಲಿ ಶೇ.50 ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದು, ಮೂಕ ಪ್ರಾಣಿಗಳ ಸೇವೆ ಮಾಡುತ್ತಿದ್ದಾರೆ. ಪಶುಗಳನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕಾರ್ಯನಿರ್ವಹಿಸುವ ಮಹಿಳೆಯರ ಸ್ಥೈರ್ಯಕ್ಕೆ ಇಂದು ಧಕ್ಕೆಯಾಗಿದೆ. ಇಂತಹ ಘಟನೆಗಳು ಮರುಕಳಿಸದ ನಿಟ್ಟಿನಲ್ಲಿ ಅತ್ಯಾಚಾರಗಳಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಸಮಾಜಕ್ಕೆ ಸಂದೇಶವನ್ನು ನೀಡಬೇಕಿದೆ ಎಂದು ಹೇಳಿದರು.ಕರ್ನಾಟಕ ಪಶುವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ನಾಗಣ್ಣ ಮಾತನಾಡಿ ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ನಡೆದಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ್ ತ್ವರಿತವಾಗಿ ವಿಚಾರಣೆ ನಡೆಸಬೇಕು, ಮಧ್ಯರಾತ್ರಿ ವಿಚಾರಣೆ ಮಾಡಿ ನ್ಯಾಯ ನೀಡುವ ವ್ಯವಸ್ಥೆಯ ಮೇಲೆ ಭಾರತೀಯರು ನಂಬಿಕೆ ಇಟ್ಟಿದ್ದು, ಪ್ರಿಯಾಂಕರೆಡ್ಡಿ ಆರೋಪಿಗಳಿಗೆ ಕಠಿಣವಾಗಿ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.

      ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಡಾ.ಎ.ಸಿ.ದಿವಾಕರ್, ಪ್ರಧಾನ ಕಾರ್ಯದರ್ಶಿ ಡಾ.ಆರ್.ಎಂ.ನಾಗಭೂಷಣ, ಜಂಟಿ ಕಾರ್ಯದರ್ಶಿ ಡಾ.ಮಹದೇವಯ್ಯ, ಡಾ.ಬಿ.ಆರ್.ನಂಜೇಗೌಡ, ಡಾ.ಎಸ್.ಶಶಿಕಾಂತ್ ಬೂದಿಹಾಳ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

(Visited 19 times, 1 visits today)

Related posts