ಹೋಬಳಿ ಕೇಂದ್ರಗಳಲ್ಲಿ ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರಗಳು

ತುಮಕೂರು :

      ಪೂರ್ವ ಮುಂಗಾರು ಆರಂಭವಾಗಿರುವ ಹಿನ್ನಲೆಯಲ್ಲಿ ರೈತರಿಗೆ ಬಿತ್ತನೆ ಕಾರ್ಯಕ್ಕೆ ಬೇಕಾಗುವ ಕೃಷಿ ಸಲಕರಣೆಗಳನ್ನು ಎಲ್ಲಾ ಹೋಬಳಿ ಕೇಂದ್ರಗಳಲ್ಲಿರುವ ಕೃಷಿಯಂತ್ರಧಾರೆ ಮೂಲಕ ಬಾಡಿಗೆ ಆಧಾರದಲ್ಲಿ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ ಅಧಿಕಾರಿಗಳಿಗೆ ಸೂಚಿಸಿದರು.

      ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಬಿತ್ತನೆ ಕಾರ್ಯಕ್ಕೆ ತೊಂದರೆಯಾಗದಂತೆ ರಿಯಾಯಿತಿ ಧರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಉಪಕರಣಗಳನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದರು.

       ಸಹಾಯಕ ಕೃಷಿ ನಿರ್ದೇಶಕ ಎನ್.ಕೆಂಗೇಗೌಡ ಸಭೆಗೆ ಮಾಹಿತಿ ನೀಡಿ, ಮೇ.ಅಂತ್ಯಕ್ಕೆ 142 ಮಿ.ಮೀ ಮಳೆಯಾಗಬೇಕಿತ್ತು, ಪ್ರಸ್ತುತ 119 ಮಿ.ಮೀ. ಮಳೆಯಾಗಿದ್ದು, ಪೂರ್ವ ಮುಂಗಾರಿನಲ್ಲಿ ಕೃಷಿ ಚಟುವಟಿಕೆಗಳಿಗೆ ಈಗ ಆಗಿರುವ ಮಳೆ ಉತ್ತಮವಾಗಿದೆ. ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು ಎಂದರು.

       27660 ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ ಮುಂಗಾರು ಬಿತ್ತನೆ ಗುರಿ ನೀಡಲಾಗಿದ್ದು, ಇಲ್ಲಿವೆಗೆ 150 ಹೆಕ್ಟೇರ್‍ನಲ್ಲಿ ಮಾತ್ರ ಬಿತ್ತನೆಯಾಗಿದೆ. ಈಗಾಗಲೇ ವಿವಿಧ ಬಿತ್ತನೆ ಬೀಜಗಳಾದ ಹೆಸರು 15 ಕ್ವಿಂಟಾಲ್, ಅಲಸಂದೆ 7.8 ಕ್ವಿಂಟಾಲ್, ತೊಗರಿ 23 ಕ್ವಿಂಟಾಲ್, ಶೇಂಗಾ 10 ಕ್ವಿಂಟಾಲ್ ವಿತರಣೆ ಮಾಡಲಾಗಿದ್ದು, ರಾಗಿ, ಭತ್ತ ಮತ್ತು ಮೆಕ್ಕೆಜೋಳ ದಾಸ್ತಾನಿದೆ ಎಂದು ಹೇಳಿದರು.
ನರೇಗ ಯೋಜನೆಯಡಿಯಲ್ಲಿ ಕಂದಕ, ಬದು ನಿರ್ಮಾಣ ಮಾಡುವುದಕ್ಕೆ, ಕೃಷಿಹೊಂಡ ನಿರ್ಮಾಣ, ಎರೆಹುಳು ತೊಟ್ಟಿ ನಿರ್ಮಾಣ ಮಾಡುವುದಕ್ಕೆ ಅವಕಾಶವಿದೆ. ಪ್ರತಿ ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳಿದ್ದು, ರೈತರಿಗೆ ಬಾಡಿಗೆ ಆಧಾರದಲ್ಲಿ ಯಂತೋಪಕರಣಗಳು ಸಿಗಲಿವೆ. ರೈತರು ಬಾಡಿಗೆ ಆಧಾರದಲ್ಲಿ ಯಂ ತ್ರೋಪಕರಣಗಳನ್ನು ಉಪಯೋಗಿಸಿಕೊಂಡು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳಬಹುದು ಎಂದು ತಿಳಿಸಿದರು.

       ತಾಲ್ಲೂಕು ಆರೋಗ್ಯಾಧಿಕಾರಿ ಶರತ್ ಚಂದ್ರ ಮಾತನಾಡಿ, ಕೋವಿಡ್-19 ಜಿಲ್ಲೆಯಲ್ಲಿ 28 ಪ್ರಕರಣಗಳು ದೃಢಪಟ್ಟಿದ್ದು, ಅದರಲ್ಲಿ 9 ಪ್ರಕರಣಗಳು ತುಮಕೂರು ಗ್ರಾಮಾಂತರದಲ್ಲಿ ದೃಢಪಟ್ಟಿವೆ. ಎಲ್ಲರೂ ಕೋವಿಡ್-19 ಕ್ವಾರಂಟೈನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

       ತುಮಕೂರು ಗ್ರಾಮಾಂತರದಲ್ಲಿ ಕೋವಿಡ್-19 ಗೆ ಸಂಬಂಧಪಟ್ಟಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ರೋಗ ಲಕ್ಷಣಗಳು ಕಂಡು ಬರದಿದ್ದರೂ ಸೋಂಕು ತಗುಲುವ ಸಾಧ್ಯಗಳಿರುವುದರಿಂದ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸುತ್ತಿರಬೇಕು, ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯ ಎಂದು ಹೇಳಿದರು.

      ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಹಣಕಾಸು ಅಧಿಕಾರಿ ಆದಿಲಕ್ಷ್ಮಮ್ಮ ಮಾತನಾಡಿ, 2020-21ನೇ ಸಾಲಿನ ಲಿಂಕ್ ಡಾಕ್ಯೂಮೆಂಟ್ ಅಡಿ 194 ಕೋಟಿ ರೂ. ಅನುದಾನದಲ್ಲಿ 188 ಕೋಟಿ ರೂ. ಖರ್ಚಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಇನ್ನು 2020-21ನೇ ಸಾಲಿನ ಆಸ್ತಿ ಘೋಷಣೆ ವಿವರಗಳನ್ನು ಆನ್‍ಲೈನ್‍ನಲ್ಲಿ ಸಲ್ಲಿಸಬೇಕು ಎಂದು ತಿಳಿಸಿದರು.

      ತಾಪಂ ಇಒ ಜೈಪಾಲ್ ಮಾತನಾಡಿ, ತುಮಕೂರು ಗ್ರಾಮಾಂತರದಲ್ಲಿ ಬದು ಮಾಸಾಚರಣೆ ಮಾಡುತ್ತಿದ್ದು, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರೈತರು ತಮ್ಮ ಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಂಡರೆ ಎಕರೆಗೆ 10 ಸಾವಿರ ರೂ, ನೀಡುವ ಯೋಜನೆ ಇದೆ. ರೈತರು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

      ಅಂತರ್ಜಲ ವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಈ ಸಂದರ್ಭದಲ್ಲಿ ಇಒ ಜೈಪಾಲ್ ಮನವಿ ಮಾಡಿದರು.
ಕೋವಿಡ್-19 ಹಿನ್ನಲೆಯಲ್ಲಿ ತಾಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆಯಲ್ಲಿ ಪಾಲ್ಗೊಂಡಿದ್ದರು.

      ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಶಾಂತಕುಮಾರ್ ಸೇರಿದಂತೆ ತಾಪಂ ಸದಸ್ಯರು, ಅರಣ್ಯ, ಶಿಕ್ಷಣ, ಸಮಾಜ ಕಲ್ಯಾಣ ಬಿಸಿಎಂ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

(Visited 15 times, 1 visits today)

Related posts

Leave a Comment