ತುಮಕೂರು : 131 ಡಿಎಲ್ ಅಮಾನತ್ತು

ತುಮಕೂರು : 

      2021ರ ಜನವರಿ 31ರ ಅಂತ್ಯಕ್ಕೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ 131 ವಾಹನ ಸವಾರರ ವಾಹನ ಪರವಾನಗಿ ಅಮಾನತ್ತುಗೊಳಿಸಲಾಗಿದ್ದು, ಹೆಚ್ಚು ತಪಾಸಣೆ ನಡೆಸುವ ಮೂಲಕ ಸಂಚಾರ ಸುರಕ್ಷತೆಯನ್ನು ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೊಲೀಸ್, ಲೋಕೋಪಯೋಗಿ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 48, 206, 75ರಲ್ಲಿ 54 ಅಪಘಾತ ವಲಯ(ಬ್ಲ್ಯಾಕ್ ಸ್ಪಾಟ್) ಹಾಗೂ ರಾಜ್ಯ ಹೆದ್ದಾರಿ 3 ಮತ್ತು 33ರಲ್ಲಿ 18 ಅಪಘಾತ ವಲಯಗಳನ್ನು ಗುರುತಿಸಲಾಗಿದೆ. ಈ ಅಪಘಾತ ವಲಯಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಜಂಟಿ ಸಮೀಕ್ಷೆಯಲ್ಲಿರುವ ವರದಿಯನ್ವಯ ರಸ್ತೆ ಉಬ್ಬು, ಸೂಚನಾ ಫಲಕ ಹಾಗೂ ಕ್ಯಾಟ್‍ಐಸ್ ದೀಪ ಅವಳವಡಿಸುವ ಕಾರ್ಯವನ್ನು ಮಾರ್ಚ್ 15ರೊಳಗೆ ಪೂರ್ಣಗೊಳಿಸಿ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಲೆಕ್ಕ ಪರಿಶೋಧನೆಯನ್ನು ನಡೆಸಲಾಗಿದ್ದು, ರಸ್ತೆಗಳಲ್ಲಿ ಕೈಗೊಳ್ಳಬೇಕಾಗಿರುವ ಸುರಕ್ಷತಾ ಕ್ರಮಗಳ ಬಗ್ಗೆ ವರದಿ ನೀಡಿದೆ. ಅದರಂತೆ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ತಿಳಿಸಿದರು.

ಅಪಘಾತ ವಲಯಗಳ ರಸ್ತೆಗಳಲ್ಲಿ ಸೈನ್‍ಬೋರ್ಡ್, ಕ್ಯಾಟ್‍ಐಸ್ ಹಾಗೂ ರಸ್ತೆ ಉಬ್ಬು ನಿರ್ಮಿಸಲು ನಿಮ್ಮಲ್ಲಿರುವ ವಿಶೇಷ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ರಸ್ತೆ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪಿಡಬ್ಲ್ಯೂಡಿ ಇಂಜಿನಿಯರ್‍ಗಳಿಗೆ ಸೂಚನೆ ನೀಡಿದರು.

      ಕೆಶಿಪ್ ಇಂಜಿನಿಯರ್ ಮಾತನಾಡಿ, ಕೆಶಿಪ್ ರಸ್ತೆಗಳ ಅಪಘಾತವಲಯಗಳಲ್ಲಿಯೂ ಸೂಚನಾಫಲಕ ಹಾಗೂ ಕ್ಯಾಟ್‍ಐಸ್ ಅಳವಡಿಸಲಾಗಿದೆ. ಆದರೆ, ರಸ್ತೆ ಉಬ್ಬುಗಳನ್ನು ಅಳವಡಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ತಿಳಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಹಾಗೂ ಪೊಲೀಸ್ ವರಿಷ್ಟಾಧಿಕಾರಿ ಡಾ.ಕೆ. ವಂಶಿಕೃಷ್ಣ ಅವರು, ಅಪಘಾತವಲಯಗಳಲ್ಲಿ ರಸ್ತೆ ಉಬ್ಬು ನಿರ್ಮಿಸಿ ವಾಹನ ಸವರಾರರ ಜೀವ ರಕ್ಷಣೆ ಮಾಡಬೇಕೆಂದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಾಹನ ಖರೀದಿ ಮಾಡಿದ ನಂತರ ಸವಾರರಿಗೆ ಚಾಲನಾ ಪರವಾನಗಿ, ಎಲ್ಮೆಟ್ ಧರಿಸುವಿಕೆ, ವಾಹನ ದಾಖಲಾತಿ(ಆರ್.ಸಿ), ವಿಮೆ ಹೊಂದಿರಬೇಕು ಎಂಬುದರ ಬಗ್ಗೆ ಅರಿವು ಇರುವುದಿಲ್ಲ. ಈ ಬಗ್ಗೆ ಮೊದಲ ಹಂತದಲ್ಲಿ ತಿಪಟೂರು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಆಯಾ ಬೀಟ್ ಪೊಲೀಸ್ ಸಿಬ್ಬಂದಿಗಳಿಗೆ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ ಆನಂತರ ಇಡೀ ಜಿಲ್ಲೆಯ ಮಾಹಿತಿ ದೊರೆಯಲಿದೆ ಎಂದು ಎಸ್ಪಿ ಅವರು ಹೇಳಿದರು.

     ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ರಾಘವೇಂದ್ರ ಶೆಟ್ಟಿಗಾರ್ ಮಾತನಾಡಿ, ಅಪ್ರಾಪ್ತರು ವಾಹನ ಚಲಾವಣೆ ಮಾಡುವ ಸಂಖ್ಯೆ ಹೆಚ್ಚುತ್ತಿದ್ದು, ಇದರ ಕಡಿವಾಣಕ್ಕಾಗಿ ಶಾಲೆಗಳಲ್ಲಿ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾಧಿಕಾರಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ(ಎನ್.ಹೆಚ್.) ಇಂಜಿನಿಯರ್‍ಗಳು, ಯೋಜನಾ ನಿರ್ದೇಶಕರು ಕಳೆದ ಎರಡು ಬಾರಿ ನಡೆದ ಸಭೆಯಲ್ಲೂ ಗೈರು ಹಾಜರಾಗಿದ್ದು, ಇಂದಿನ ಸಭೆಯಲ್ಲೂ ಗೈರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆಯಬೇಕಾಗಿತ್ತು. ಹಾಗಾಗಿ ಅವರಿಗೆ ನೋಟೀಸ್ ನೀಡಲಾಗುವುದು ಎಂದು ಹೇಳಿದರು.

      ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು, ಟೂಡಾ ಆಯುಕ್ತ ಯೋಗಾನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 4 times, 1 visits today)

Related posts

Leave a Comment