ಇಂದಿರಾ ಕ್ಯಾಂಟೀನ್‍ಗೆ ಪಾಲಿಕೆ ಆಯುಕ್ತರ ದಿಢೀರ್ ಭೇಟಿ

ತುಮಕೂರು :

      ತುಮಕೂರು ನಗರದ ರೈಲುನಿಲ್ದಾಣದ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಹಾಗೂ ಮಾಸ್ಟರ್ ಕಿಚನ್‍ಗೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ಮಂಗಳವಾರ ಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

     ಇಲ್ಲಿ ಇಂದಿರಾ ಕ್ಯಾಂಟೀನ್ ಜೊತೆಗೆ ಮಾಸ್ಟರ್ ಕಿಚನ್ ಇದೆ. ನಗರದಲ್ಲಿರುವ ಎಲ್ಲ ನಾಲ್ಕು ಇಂದಿರಾ ಕ್ಯಾಂಟೀನ್‍ಗಳಿಗೂ ಈ ಮಾಸ್ಟರ್ ಕಿಚನ್‍ನಿಂದಲೇ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟ ತಯಾರಾಗಿ ಸರಬರಾಜಾಗುತ್ತದೆ. ಆಯುಕ್ತರು ಇವೆರಡನ್ನೂ ಪರಿವೀಕ್ಷಣೆ ಮಾಡಿದರು.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಇಂದಿರಾ ಕ್ಯಾಂಟೀನ್‍ಗೆ ದಿಢೀರನೆ `ಭೂಬಾಲನ್ ಅವರು ಆಗಮಿಸಿದರು. ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಪರಿಸರ ಇಂಜಿನಿಯರ್ಗಳಾದ ಮೃತ್ಯುಂಜಯ ಮತ್ತು ನಿಖಿತಾ, ಹೆಲ್ತ್‍ಇನ್ಸ್‍ಪೆಕ್ಟರ್ ರುದ್ರೇಶ್ ಜೊತೆಯಲ್ಲಿದ್ದರು.

ಊಟ ಮಾಡಿದ ಆಯುಕ್ತರು:

      ಆಗಷ್ಟೇ ಕ್ಯಾಂಟೀನ್ ಸಿಬ್ಬಂದಿ ವರ್ಗದವರು ಕ್ಯಾಂಟೀನ್ ಆವರಣವನ್ನು ಶುದ್ಧಗೊಳಿಸಿದ್ದು, ಮಧ್ಯಾಹ್ನ 12-30 ಕ್ಕೆ ಆರಂಭವಾಗಲಿದ್ದ ಊಟದ ವಿತರಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅದೇ ಹೊತ್ತಿಗೆ ಕ್ಯಾಂಟೀನ್ ಒಳಗಿನ ಊಟ ವಿತರಿಸುವ ಕೌಂಟರ್ ಸ್ಥಳವನ್ನು ಪ್ರವೇಶಿಸಿದ ಆಯುಕ್ತರು, ಅನ್ನ, ಸಾಂಬಾರ್ ಮತ್ತು ಮೊಸರನ್ನ ಇರಿಸಿದ್ದ ಪಾತ್ರೆ/ಕಂಟೈನರ್ಗಳನ್ನು ಪರಿಶೀಲಿಸುತ್ತ ಅಲ್ಲಿದ್ದ ಇಂದಿರಾ ಕ್ಯಾಂಟೀನ್ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.

      ಬಳಿಕ ತಟ್ಟೆಯೊಂದಕ್ಕೆ ಊಟ ಹಾಕಿಸಿಕೊಂಡು ರುಚಿಯನ್ನು ಪರೀಕ್ಷಿಸಿದರು. ಅನ್ನ ಮತ್ತು ಸಾಂಬಾರ್ ರುಚಿಕರವಾಗಿದೆಯೆಂದು ಹಾಗೂ ಮೊಸರನ್ನಕ್ಕೆ ಇನ್ನೂ ಸ್ವಲ್ಪ ಮೊಸರು ಬೆರೆಸಬೇಕಿತ್ತೆಂದು ಆಯುಕ್ತರು ಅಭಿಪ್ರಾಯಪಟ್ಟರು. ಅಲ್ಲಿನ ಟಿಕೇಟ್ ಕೌಂಟರ್, ಕುಡಿಯುವ ನೀರು, ಕೈತೊಳೆಯುವ ವ್ಯವಸ್ಥೆ ಇತ್ಯಾದಿಗಳನ್ನೂ ಗಮನಿಸಿದರು.

ಸಾರ್ವಜನಿಕರ ಮೆಚ್ಚುಗೆ:

      ಬಳಿಕ 12-30 ಕ್ಕೆ ಸಾರ್ವಜನಿಕರಿಗೆ ಊಟದ ವಿತರಣೆ ಆರಂಭವಾಯಿತು. ಅನೇಕ ಜನರು -ಅದರಲ್ಲೂ ವಿದ್ಯಾರ್ಥಿಗಳು ಊಟಕ್ಕೆ ಧಾವಿಸಿದರು. ಆಯುಕ್ತರು ಸಾರ್ವಜನಿಕರನ್ನೂ ಇಲ್ಲಿನ ವ್ಯವಸ್ಥೆಯ ಬಗ್ಗೆ ವಿಚಾರಿಸಿದರು. ಮಧುಗಿರಿಯಿಂದ ಬಂದಿದ್ದ ಕಾಲೇಜು ವಿದ್ಯಾರ್ಥಿಯು “ಊಟ ರುಚಿಯಾಗಿದೆ. ತೃಪ್ತಿಕರವಾಗಿದೆ’’ ಎಂದು ಹೇಳಿದರು.

      ಕ್ಯಾಂಟೀನ್ ಒಳಗೆ ಊಟ ಮಾಡುತ್ತಿದ್ದ ಹಿರಿಯ ನಾಗರಿಕರೊಬ್ಬರನ್ನು ಪ್ರಶ್ನಿಸಿದಾಗ, “ನಾನು ಆಗಾಗ ಬರುತ್ತಿರುತ್ತೇನೆ. ಇಲ್ಲಿನ ಉಪಹಾರ ಮತ್ತು ಊಟ ನಮ್ಮ ಮನೆಯಲ್ಲಿ ಸೇವಿಸಿದಷ್ಟೇ ಚೆನ್ನಾಗಿದೆ’’ ಎಂದು ಪ್ರತಿಕ್ರಿಯಿಸಿದರು.

   ಮಾಸ್ಟರ್ ಕಿಚನ್ ವೀಕ್ಷಣೆ:

      ನಂತರ ಆಯುಕ್ತರು ಅಲ್ಲೇ ಹಿಂಭಾಗದಲ್ಲಿರುವ ಮಾಸ್ಟರ್ ಕಿಚನ್‍ಗೆ ಭೇಟಿ ನೀಡಿ ಅಲ್ಲಿನ ಕಾರ್ಯವನ್ನು ವೀಕ್ಷಿಸಿದರು. ಇಂದಿರಾ ಕ್ಯಾಂಟೀನ್ ಮತ್ತು ಮಾಸ್ಟರ್ ಕಿಚನ್‍ನ ಮ್ಯಾನೇಜರ್ ಜಯನಾಗೇಶ್ ಅವರು ಹಾಜರಿದ್ದು, ಅಡಿಗೆ ತಯಾರಿಯ ಉಪಕರಣಗಳು ಮತ್ತು ಸಿದ್ಧತಾ ಕಾರ್ಯಗಳನ್ನು ವಿವರಿಸಿದರು.

ಇಂಟರ್ಲಾಕ್ ಅವ್ಯವಸ್ಥೆ: ಇ.ಇ. ಗೆ ಸೂಚನೆ:

      ಇಂದಿರಾ ಕ್ಯಾಂಟೀನ್ ಆವರಣದಲ್ಲಿ ನೆಲಹಾಸು ಆಗಿ ಹಾಕಿರುವ ಇಂಟರ್ಲಾಕ್ ಸಮತಟ್ಟಾಗಿಲ್ಲದೆ ಅಸ್ತವ್ಯಸ್ತವಾಗಿರುವುದನ್ನು ಗಮನಿಸಿದ ಆಯುಕ್ತ ಭೂಬಾಲನ್ ಅವರು ಕೂಡಲೇ ತುಮಕೂರುಮಹಾನಗರ ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್ ಆಶಾ ಅವರನ್ನು ಸ್ಥಳಕ್ಕೆ ಕರೆಸಿ, ಇಂಟರ್ಲಾಕ್ ಸಮತಟ್ಟುಗೊಳಿಸುವ ಬಗ್ಗೆ ತುರ್ತುಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

      ಈ ಅನಿರೀಕ್ಷಿತ ಭೇಟಿಯ ಕೊನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಭೂಬಾಲನ್ ಅವರು, “ಇಂದಿರಾ ಕ್ಯಾಂಟೀನ್ ವ್ಯವಸ್ಥೆ ಮೇಲ್ನೋಟಕ್ಕೆ ಚೆನ್ನಾಗಿ ಕಂಡುಬರುತ್ತಿದೆ. ರುಚಿಗೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಲಾಗಿದೆ. ಮಹಾನಗರ ಪಾಲಿಕೆ ಆವರಣದಲ್ಲಿರುವ ನಿರಾಶ್ರಿತರ ವಸತಿ ಕೇಂದ್ರಕ್ಕೆ ರಾತ್ರಿ ವೇಳೆಯಲ್ಲಿ ಆಶ್ರಯ ಪಡೆಯಲು ಬರುವವರಿಗೆ ಇಂದಿರಾಕ್ಯಾಂಟೀನ್‍ನಿಂದ ಊಟವನ್ನು ಒದಗಿಸಲು ಯೋಜಿಸಲಾಗಿದೆ. ಅದೇ ರೀತಿ ಪಾಲಿಕೆಯ ಪೌರಕಾರ್ಮಿಕರಿಗೆ ಪ್ರತಿನಿತ್ಯ ಬೆಳಗಿನ ಉಪಹಾರವನ್ನು ಇಂದಿರಾ ಕ್ಯಾಂಟೀನ್‍ನಿಂದಲೇ ಪೂರೈಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ’’ ಎಂದು ತಿಳಿಸಿದರು.

(Visited 14 times, 1 visits today)

Related posts