ಉದಾಸೀನವೇ ಡೆಂಗ್ಯು ಪ್ರಕರಣ ಹೆಚ್ಚಾಗಲು ಕಾರಣ

ತುಮಕೂರು:

      ಡೆಂಗ್ಯು, ಚಿಕುನ್‍ಗುನ್ಯಾ, ಮಲೇರಿಯಾ, ನಿಫಾ ಮತ್ತಿತರ ಸಾಂಕ್ರಾಮಿಕ ರೋಗಗಳು ಹೆಚ್ಚಾಗಲು ನಮ್ಮಲ್ಲಿರುವ ಉದಾಸೀನ ಮನೋಭಾವವೇ ಕಾರಣ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ|| ಸಿದ್ದೇಗೌಡ ಬೇಸರ ವ್ಯಕ್ತಪಡಿಸಿದರು.

       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನರ್ಸಿಂಗ್ ಕಾಲೇಜ್, ಎನ್‍ಸಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿಗಳ ಸಂಯುಕ್ತಾಶ್ರಯದಲ್ಲಿ ಮಹಾನಗರ ಪಾಲಿಕೆ ಆವರಣದಲ್ಲಿಂದು ಹಮ್ಮಿಕೊಂಡಿದ್ದ “ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮ”ವನ್ನುದ್ದೇಶಿಸಿ ಅವರು ಮಾತನಾಡಿದರು.

      ಡೆಂಗ್ಯು ಮತ್ತಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ರೋಗ ಹರಡದಂತೆ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ಇದ್ದರೂ ಸಹ ಉದಾಸೀನ ನಡವಳಿಕೆ ತೋರುತ್ತಿದ್ದಾರೆ. ರೋಗ ತಗುಲಿದಾಗ ವಾಸಿ ಮಾಡುವುದಕ್ಕಿಂತ ರೋಗ ಹರಡದಂತೆ ನಿಯಂತ್ರಿಸುವುದೇ ಬಹುಪಾಲು ಮೇಲು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ. ಆರೋಗ್ಯವಿರದ ಸಂಪತ್ತಿಗೆ ಯಾವುದೇ ಕಿಮ್ಮತ್ತಿರುವುದಿಲ್ಲ. ಈ ನಿಟ್ಟಿನಲ್ಲಿ ಸ್ವಇಚ್ಚಾಶಕ್ತಿಯಿಂದ ಆರೋಗ್ಯಕರ ಸಮಾಜ ನಿರ್ಮಾಣದ ಜವಾಬ್ದಾರಿಯನ್ನು ಅರಿತು ನಾವೆಲ್ಲರೂ ನೈತಿಕ ಹೊಣೆ ಹೊರುವ ಮೂಲಕ ತುಮಕೂರನ್ನು ಡೆಂಗ್ಯು ಮುಕ್ತ ಜಿಲ್ಲೆಯನ್ನಾಗಿ ಮಾಡುವಲ್ಲಿ ಸಹಕರಿಸೋಣ ಎಂದು ತಿಳಿಸಿದರು.

      ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಾನಗರಪಾಲಿಕೆ ಆಯುಕ್ತ ಭೂಬಾಲನ್ ತುಮಕೂರು ನಗರವನ್ನು ಸೊಳ್ಳೆ ಮುಕ್ತ ಹಾಗೂ ಡೆಂಗ್ಯು ಮುಕ್ತವನ್ನಾಗಿ ಮಾಡುವಲ್ಲಿ ಪಾಲಿಕೆಯು ದಿಟ್ಟ ಹೆಜ್ಜೆ ಇಟ್ಟಿದ್ದು, ನಾಗರಿಕರು ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಡೆಂಗೀ ಜ್ವರವು ಸೊಳ್ಳೆಗಳಿಂದ ಹರಡುವ ಖಾಯಿಲೆಯಾಗಿದ್ದು, ಸೊಳ್ಳೆಗಳ ನಿಯಂತ್ರಣದಿಂದ ಡೆಂಗೀಯನ್ನು ತಡೆಗಟ್ಟೆಬಹುದು. ಮನೆಯ ಒಳಗಿನ ಹಾಗೂ ಮನೆಯ ಸುತ್ತಮುತ್ತಲಿರುವ ನೀರಿನ ಶೇಖರಣೆ ಹಾಗೂ ಘನತ್ಯಾಜ್ಯ ವಸ್ತುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗೀಜ್ವರ ಹರಡುತ್ತದೆ. ಪಟ್ಟಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಈ ಜ್ವರ ಗ್ರಾಮಾಂತರ ಪ್ರದೇಶಗಳಲ್ಲಿಯೂ ಕಂಡು ಬರುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ತಿಳಿಸಿದರು.

      ಡೆಂಗ್ಯು ಹರಡದಂತೆ ತಡೆಗಟ್ಟಲು ಸೊಳ್ಳೆಗಳ ಕಚ್ಚುವಿಕೆಯಿಂದ ರಕ್ಷಿಸಿಕೊಳ್ಳುವುದು ಸುಲಭೋಪಾಯವಾಗಿದೆ. ಸಂಜೆ ಹೊತ್ತು ಮನೆಯ ಕಿಟಕಿ-ಬಾಗಿಲುಗಳನ್ನು ಮುಚ್ಚುವುದರಿಂದ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ. ಇಂದಿನ ದಿನದಲ್ಲಿಯೂ ಸಂಜೆ ವೇಳೆ ಬಾಗಿಲು ತೆರೆದಿಟ್ಟರೆ ಲಕ್ಷ್ಮಿ ಬರುವಳೆಂಬ ಮೌಢ್ಯತೆ ಜನರಲ್ಲಿದೆ. ಕಿಟಕಿ-ಬಾಗಿಲು ತೆರೆದಿಡುವುದರಿಂದ ಲಕ್ಷ್ಮಿಯೊಂದಿಗೆ ಸೊಳ್ಳೆಗಳೂ ಬಂದು ಇನ್ನಿತರ ರೋಗಗಳು ಬರುವ ಸಾಧ್ಯತೆ ಇರುವುದರಿಂದ ನಾಗರಿಕರು ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದರು.

      ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ: ಟಿ.ಎನ್.ಪುರುಷೋತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 2019ರ ಜನವರಿಯಿಂದ ಈವರೆಗೂ ತುಮಕೂರು ತಾಲ್ಲೂಕು-14, ಕೊರಟಗೆರೆ-5, ಪಾವಗಡ-2, ಗುಬ್ಬಿ-2, ತಿಪಟೂರು-4, ಇತರೆ ಜಿಲ್ಲೆಯ 3 ಪ್ರಕರಣ ಸೇರಿದಂತೆ 30 ಡೆಂಗ್ಯು ಪ್ರಕರಣಗಳು ವರದಿಯಾಗಿವೆ. ಡೆಂಗ್ಯು ನಿಯಂತ್ರಣಕ್ಕಾಗಿ ಇಲಾಖೆಯಿಂದ ಲಾರ್ವಾ ಸಮೀಕ್ಷೆ ಹಾಗೂ ಇತರೆ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದು, ಸೊಳ್ಳೆ ಉತ್ಪತ್ತಿಯಾಗದಂತೆ ತಡೆಗಟ್ಟಲು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರಲ್ಲದೆ, ಇತ್ತೀಚಿನ ದಿನಗಳಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವುದರಿಂದ ಸಾರ್ವಜನಿಕ ಅರಿವು ಮೂಡಿಸಲು ಡೆಂಗ್ಯು ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

     ಡೆಂಗ್ಯು, ಚಿಕುನ್‍ಗುನ್ಯಾ ಅಪಾಯಕಾರಿ ಖಾಯಿಲೆಗಳಾಗಿದ್ದು, ಪ್ರಪಂಚದಾದ್ಯಂತ ಬಹುವೇಗವಾಗಿ ಸೊಳ್ಳೆಯಿಂದ ಹರಡುತ್ತಿದೆ. ಈ ಡೆಂಗೀ ಜ್ವರವು 150 ವರ್ಷದ ಹಳೆಯ ಖಾಯಿಲೆಯಾಗಿದ್ದರೂ ಕಳೆದ 50 ವರ್ಷಗಳಲ್ಲಿ 30ಪಟ್ಟು ಜಾಸ್ತಿಯಾಗಿರುವುದು ಅಪಾಯಕಾರಿ ಸಂಗತಿ. ಅಭಿವೃದ್ಧಿಶೀಲ ರಾಷ್ಟಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ರೋಗವು ಸಾವು-ನೋವುಗಳನ್ನು ಉಂಟು ಮಾಡುತ್ತದೆ.

     ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಬಿ.ಆರ್.ಚಂದ್ರಿಕಾ, ಆರೋಗ್ಯಾಧಿಕಾರಿ ಡಾ: ಟಿ.ನಾಗೇಶ್ ಕುಮಾರ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ: ಮೋಹನ್‍ದಾಸ್ ಆರ್.ವಿ., ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ವೀರಭದ್ರಯ್ಯ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ: ರಜನಿ ಎಂ., ಆಯುಷ್ ಅಧಿಕಾರಿ ಡಾ: ಸಂಜೀವ್ ಮೂರ್ತಿ, ನರ್ಸಿಂಗ್ ಶಾಲೆ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಎಎನ್‍ಎಂಗಳು, ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಡೆಂಗ್ಯು ಮತ್ತು ಚಿಕುನ್‍ಗುನ್ಯಾ ರೋಗಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು, ಸ್ವಚ್ಛತೆ ಕಾಪಾಡುವಿಕೆ, ಪರಿಸರ ನೈರ್ಮಲ್ಯ, ಡೆಂಗ್ಯು ರೋಗವನ್ನು ಹರಡುವ ಈಡೀಸ್ ಸೊಳ್ಳೆಯ ಜೀವನ ಕ್ರಮ, ಮನೆಯಲ್ಲಿ ಸೊಳ್ಳೆ ನಿಯಂತ್ರಣ ಕುರಿತಂತೆ ವಿವಿಧ ಶಾಲಾ ಮಕ್ಕಳು ವಸ್ತುಪ್ರದರ್ಶನ ಏರ್ಪಡಿಸಿದ್ದರು. ವಸ್ತುಪ್ರದರ್ಶನದಲ್ಲಿ ಸದಾಶಿವ ನಗರದ ಶ್ರೀ ಭೈರವೇಶ್ವರ ಪ್ರೌಢಶಾಲೆ, ರಾಘವೇಂದ್ರ ನಗರದ ನಳಂದ ಶಾಲೆ, ವಿದ್ಯಾನಿಕೇತನ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ, ಅತ್ತಿಮಬ್ಬೆ ವಿದ್ಯಾಮಂದಿರ, ವಾಸವಿ ವಿದ್ಯಾಪೀಠ, ಭಾರತ್ ಮಾತ ಆಂಗ್ಲ ಮಾಧ್ಯಮ ಶಾಲೆಗಳು ಪಾಲ್ಗೊಂಡಿದ್ದವು.

      ಇದಕ್ಕೂ ಮುನ್ನ ವಿಶ್ವವಿದ್ಯಾನಿಲಯದಿಂದ ಏರ್ಪಡಿಸಲಾಗಿದ್ದ ಡೆಂಗ್ಯು ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಪ್ರೊ.ಸಿದ್ದೇಗೌಡ ಚಾಲನೆ ನೀಡಿದರು. ಜಾಥಾ ಕಾರ್ಯಕ್ರಮವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನಜಾಗೃತಿ ಮೂಡಿಸಿತು. ನರ್ಸಿಂಗ್ ವಿದ್ಯಾರ್ಥಿಗಳು ಆಶಾ ಕಾರ್ಯಕರ್ತೆಯರು, ಅಧಿಕಾರಿಗಳು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

(Visited 25 times, 1 visits today)

Related posts