ಸ್ಮಾರ್ಟ್‍ಸಿಟಿ ಪರಿಕಲ್ಪನೆಗೆ ಕೆಂಪೇಗೌಡರು ಪ್ರೇರಣೆ: ಶಾಸಕ ಜ್ಯೋತಿಗಣೇಶ್


ತುಮಕೂರು:


ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯನ್ನು ಜಿಲ್ಲಾಡಳಿತದಿಂದ ಸೋಮವಾರ ಸಾಂಕೇತಿಕವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಸ್ಪಾರ್ಚನೆ ಸಲ್ಲಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು, ನಾಡಪ್ರಭು ಕೆಂಪೇಗೌಡರ ಕೊಡುಗೆ ಕರ್ನಾಟಕದ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದ್ದು ಬೆಂಗಳೂರು ಮುಖಾಂತರ ಎಂದು ಎಲ್ಲರಿಗೂ ತಿಳಿದ ವಿಷಯ. ಬೆಂಗಳೂರಿನ ನಿರ್ಮಾತೃ, ಬೆಂಗಳೂರನ್ನು ಇದೇ ರೀತಿಯಲ್ಲಿ ಕಟ್ಟಬೇಕೆಂಬ ದೂರದೃಷ್ಠಿಯ ಕನಸನ್ನು ಹೊಂದಿದ್ದವರು ಎಂದು ಬಣ್ಣಿಸಿದರು. ಬೆಂಗಳೂರು ಸೇರಿದಂತೆ ಅವರು ಆಳಿದ ಜಿಲ್ಲೆಗಳಲ್ಲಿ ತುಮಕೂರು ಕೂಡ ನೇರವಾದ ಆಡಳಿತದಲ್ಲಿ ಒಳಪಟ್ಟಂತಹ ಜಿಲ್ಲೆಯಾಗಿದೆ. ಎಲ್ಲರಿಗೂ ಆಹಾರವನ್ನು ನೀಡುವಂತಹವರು ರೈತರು ಆ ರೈತರಿಗೆ ನಮ್ಮ ಜಿಲ್ಲೆಯಲ್ಲಿ ಕೆರೆಗಳನ್ನು ಕಟ್ಟಿ ಅನುಕೂಲ ಕಲ್ಪಿಸಿದಂತಹ ಮಹಾನ್ ವ್ಯಕ್ತಿ ಎಂದರೆ ಕೆಂಪೇಗೌಡರು ಎಂದರು.
ಕೆಲವು ದೊಡ್ಡ ದೊಡ್ಡ ನಗರಗಳು ಸಮುದ್ರದ ತಟದಲ್ಲಿ ಅಪಾಯದಲ್ಲಿವೆ. ಆದರೆ ಬೆಂಗಳೂರು ನಗರ ನಿರ್ಮಾಣ ಮಾಡಿರುವುದು ಸಮುದ್ರ ತಟಕ್ಕಿಂತ 3000 ಅಡಿಗಳಷ್ಟು ಮೇಲ್ಬಾಗದಲ್ಲಿದೆ. ಭೂಕಂಪ ಆದರೂ ಸಹ ಅಷ್ಟು ಪ್ರಭಾವ ಬೀರುವುದಿಲ್ಲ, ಇಂತಹ ಪರಿಕಲ್ಪನೆಯನ್ನು ಹೊಂದಿ ಬೆಂಗಳೂರನ್ನು ನಿರ್ಮಾಣ ಮಾಡಿದಂತಹ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಅರಳೆಪೇಟೆ, ಅಕ್ಕಿಪೇಟೆ, ಮಂಡಿಪೇಟೆ, ಅಂಚೆಪೇಟೆ, ಬಳೇಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಉಪ್ಪಾರಪೇಟೆ, ಸುಲ್ತಾನಪೇಟೆ, ಕಬ್ಬನ್ಪೇಟೆ, ಬಿನ್ನಿಪೇಟೆಗಳು, ಉದ್ಯಾನಗಳು, ಕೆರೆಗಳು, ಹೀಗೆ ನಗರದ ಯೋಜನೆಗಳಿಗೆ ಹೊಸ ಪರಿಕಲ್ಪನೆಯನ್ನು ಕೊಟ್ಟಂತಹವರು ಕೆಂಪೇಗೌಡರು ಎಂದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ಸಾಂಕೇತಿಕವಾಗಿ ಇಂದು ಕೆಂಪೇಗೌಡರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ ಎಂದರು. ಸ್ಮಾರ್ಟ್‍ಸಿಟಿ ನೀವು ಹುಟ್ಟು ಹಾಕಿದ್ದು ಎಂದುಕೊಳ್ಳಬೇಡಿ, ನಾಡಪ್ರಭು ಕೆಂಪೇಗೌಡರು ಅಂದೇ ಸ್ಮಾರ್ಟ್‍ಸಿಟಿ ಪರಿಕಲ್ಪನೆಯನ್ನು ಕೊಟ್ಟಿದ್ದರು ಎಂದು ಮಾಜಿ ಸಿಎಂ ಸದಾನಂದಗೌಡರು ಹೇಳಿದ್ದ ಮಾತು ಇಂದು ನೆನಪಿಗೆ ಬರುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಂತಹ ಸ್ಮಾರ್ಟ್‍ಸಿಟಿ ಪರಿಕಲ್ಪನೆಗೆ ಕೆಂಪೇಗೌಡರ ಪ್ರೇರಣೆ ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ವಾಸ್ತುಶಿಲ್ಪಿ, ಸಿವಿಲ್ ಇಂಜಿನಿಯರ್, ಉತ್ತಮ ತಂತ್ರಜ್ಞ, ಹಣಕಾಸು, ಶಿಕ್ಷಣ, ವಹಿವಾಟು, ರಫ್ತು ಮತ್ತು ಆಮದುಗಳ ಬಗ್ಗೆ ದೂರದೃಷ್ಠಿಯ ಪರಿಕಲ್ಪನೆಯನ್ನು ಹೊಂದಿದ್ದಂತಹ ಅತ್ಯುತ್ತಮ ಹಿನ್ನಲೆಯಿರುವಂತಹ ಕೆಂಪೇಗೌಡರ ಜಯಂತಿಯನ್ನು ನಾಡಬಹಬ್ಬವೆಂದು ಸರ್ಕಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. ತುಮಕೂರು ಜಿಲ್ಲೆಯ ಮಧುಗಿರಿ, ಶಿರಾ, ಕೊರಟಗೆರೆ ಹೊಳವನಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ಕೆಂಪೇಗೌಡರ ಆಳ್ವಿಕೆಯಲ್ಲಿ ಕೆರೆ, ಕಟ್ಟೆಗಳ ನಿರ್ಮಾಣ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಉಪ ವಿಬಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್‍ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಸಮಾಜದ ಮುಖಂಡರು ಭಾಗವಹಿಸಿದ್ದರು.

(Visited 1 times, 1 visits today)

Related posts