ಉಸಿರಾಡಲು ಹಸಿರು ಬೇಕೇ ಬೇಕು-ಹೈಕೋರ್ಟ್ ನ್ಯಾ|| ನಾರಾಯಣಸ್ವಾಮಿ

 ತುಮಕೂರು :

       ನಾವೆಲ್ಲಾ ಉಸಿರಾಡಲು ಹಸಿರು ಗಿಡ-ಮರಗಳು ಬೇಕೇ ಬೇಕು ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷ ಎಲ್. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

      ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬರಮುಕ್ತ ಕರ್ನಾಟಕ ಆಂದೋಲನಾ ಸಮಿತಿ, ಮರಡಿ ರಂಗನಾಥಸ್ವಾಮಿ ಧಾರ್ಮಿಕ ಮತ್ತು ದತ್ತಿ ಸಂಸ್ಥೆ, ಶಿರಾ ಲೋಹಿಯಾ ಸಮತಾ ವಿದ್ಯಾಲಯ, ಜಿಲ್ಲಾ ಹಾಗೂ ಶಿರಾ ತಾಲೂಕು ವಕೀಲರ ಸಂಘಗಳ ಸಹಯೋಗದಲ್ಲಿಂದು ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಮರಡೀಗುಡ್ಡ ಗ್ರಾಮದಲ್ಲಿ “ಸಹಸ್ರ ಸಸಿ ನೆಡುವ ಹಾಗೂ ಏಳು ಸಹಸ್ರ ಬೀಜದುಂಡೆ ನೆಡುವ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಪ್ರತಿಯೊಂದು ಜೀವಿಯ ಅಳಿವು-ಉಳಿವು ಹಸಿರಿನ ಮೇಲೆ ನಿಂತಿದೆ. ಉಸಿರಾಡುವ ಗಾಳಿ, ತಿನ್ನುವ ಆಹಾರಕ್ಕಾಗಿ ಮರ ಗಿಡಗಳು ಬೇಕೇ ಬೇಕು. ಆಧುನಿಕ ಜಗತ್ತಿನಲ್ಲಿ ನಾವೆಲ್ಲಾ ಅಭಿವೃದ್ಧಿ ಹೆಸರಲ್ಲಿ ಕಾಡನ್ನು ಬರಡಾಗಿಸುತ್ತಿದ್ದೇವೆ. ಇದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ ಮುಂದಿನ ಪೀಳಿಗೆ ತೊಂದರೆ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡವನ್ನು ನೆಡುವುದರೊಂದಿಗೆ ನೀರುಣಿಸಿ ಬೆಳೆಸಿದಾಗ ಮಾತ್ರ ಉತ್ತಮ ಪರಿಸರ ನಮ್ಮದಾಗುತ್ತದೆ ಎಂದು ತಿಳಿಸಿದರು.

      ವಿಶ್ವ ಪರಿಸರ ದಿನಾಚರಣೆ ಹೆಸರಿನಲ್ಲಿ ವರುಷಕ್ಕೊಂದು ಬಾರಿ ಕೋಟ್ಯಾಂತರ ಸಸಿಗಳನ್ನು ನೆಟ್ಟು ಮರೆಯುವುದು ಇಂದಿನ ದುಸ್ಥಿತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸಸಿಗಳನ್ನು ನೆಟ್ಟರಷ್ಟೇ ಸಾಲದು. ಅದಕ್ಕೆ ನೀರು ಹಾಕಿ ಪೋಷಿಸಬೇಕು. ನಮ್ಮ ಪೂರ್ವಜರು ನೂರಾರು ವರ್ಷಗಳ ಹಿಂದೆ ಗಿಡಗಳನ್ನು ನೆಟ್ಟು ಬೆಳೆಸಿದ್ದರಿಂದ ಈ ಬರಗಾಲದಲ್ಲಿಯೂ ಸಹ ನಾವಿಂದು ಮರಡೀಗುಡ್ಡ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದ ನೆರಳಿನಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಇದೇ ರೀತಿ ಮುಂದಿನ ಪೀಳಿಗೆಯವರು ನಮ್ಮನ್ನು ನೆನೆಯುವಂತೆ ಮರ-ಗಿಡಗಳನ್ನು ಬೆಳೆಸಬೇಕೆಂದರಲ್ಲದೆ, ಪ್ರತಿದಿನ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾಧಿಗಳು ತಮ್ಮೊಂದಿಗೆ 1 ಲೀಟರ್ ನೀರನ್ನು ತಂದು ಗಿಡಗಳಿಗೆ ಹಾಕುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ದೇವರು ಎಂದಿಗೂ ಹೂವು, ಹಣ್ಣು, ಕಾಯಿ ಬೇಡುವುದಿಲ್ಲ. ಇದಕ್ಕೆ ಬದಲಾಗಿ ನೀರನ್ನು ತಂದು ಗಿಡಗಳಿಗೆ ಉಣಿಸಬೇಕೆಂದು ಸಲಹೆ ನೀಡಿದರು.

      ಅಧ್ಯಕ್ಷತೆ ವಹಿಸಿದ್ದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಆರ್.ದೇವದಾಸ್ ಮಾತನಾಡುತ್ತಾ, ಮರ-ಗಿಡಗಳನ್ನು ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಾಗುವುದಲ್ಲದೆ, ಅತಿವೃಷ್ಠಿಯಾದಾಗ ಭೂಮಿಯ ಮಣ್ಣು ಕೊಚ್ಚಿ ಹೋಗದೆ ಮನೆಗಳಿಗೆ ಹಾನಿಯಾಗುವುದಿಲ್ಲ ಎಂದು ತಿಳಿಸಿದರು. ನಂತರ ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶಿರಾ ತಾಲ್ಲೂಕು ಹುಯಿಲುದೊರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಶಾರದಾ ಕಾನ್ವೆಂಟ್, ಬುಕ್ಕಾ ಪಟ್ಟಣದ ಸರ್ಕಾರಿ ಪ್ರೌಢಶಾಲೆ, ಆಕ್ಸ್‍ಫರ್ಡ್ ಶಾಲೆ, ಜೀವನಿಧಿ ಪ್ರೌಢಶಾಲೆ, ತಮ್ಮಣ್ಣ ಪ್ರೌಢಶಾಲೆ, ಶಾಗದಡು ಶಾಲೆ, ಪ್ರೆಸಿಡೆನ್ಸಿ ಶಾಲೆ, ರಂಗನಾಥಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೆಂಟ್‍ಆ್ಯಂನ್ಸ್, ಜಿಜಿಜೆಸಿ ಶಾಲೆಗಳಿಗೆ ವಿವಿಧ ಬಗೆಯ ಸಸಿಗಳನ್ನು ವಿತರಿಸಿದರು.

      ಅಡ್ವೋಕೇಟ್ ಜನರಲ್ ಉದಯಹೊಳ್ಳ ಮಾತನಾಡಿ, ಮರ-ಗಿಡಗಳನ್ನು ಮಕ್ಕಳಂತೆ ಪೋಷಿಸಬೇಕು. ಕನ್ನಡ ನಾಡನ್ನು ಹಸಿರು ನಾಡನ್ನಾಗಿ ಪರಿವರ್ತಿಸುವ ಪಣವನ್ನು ನಾವೆಲ್ಲಾ ತೊಡಬೇಕು ಎಂದು ತಿಳಿಸಿದರು.

      ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, ಮರಗಿಡಗಳಿಲ್ಲದಿದ್ದರೆ ಖಂಡಿತಾ ನೀರಿನ ಬವಣೆಯನ್ನು ನಾವೆಲ್ಲಾ ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬರು ಮಳೆನೀರು ಕೊಯ್ಲು ಪದ್ಧತಿಯನ್ನು ಅನುಸರಿಸುವುದರಿಂದ ಅಂತರ್ಜಲ ಮಟ್ಟ ಏರುತ್ತದೆ ಎಂದು ಸಲಹೆ ನೀಡಿದರಲ್ಲದೆ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾನಿಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ನೈಸರ್ಗಿಕ ವಸ್ತುಗಳನ್ನು ಬಳಸುವ ಮೂಲಕ ಪರಸರವನ್ನು ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.

      ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್ ಮಾತನಾಡಿ, ಸಹಸ್ರ ಸಸಿಗಳನ್ನು ನೆಡುವ ಈ ಕಾರ್ಯಕ್ರಮ ದೊಡ್ಡ ಹೆಜ್ಜೆಯಾಗಿದೆ. ಬಹಳ ಹಿಂದೆ ಮರಡೀಗುಡ್ಡ ಪ್ರದೇಶ ಪ್ರಾಣಿ, ಪಕ್ಷಿಗಳಿಂದ ಕೂಡಿದ್ದ ಬೃಹತ್ ಅರಣ್ಯವಾಗಿತ್ತು. ಮನುಷ್ಯನ ದುರಾಸೆಯಿಂದ ಇಂದು ವಿನಾಶದ ಅಂಚಿಗೆ ತಲುಪುತ್ತಿದೆ. ಇನ್ನಾದರೂ ಜನರು ಜಾಗೃತಗೊಂಡು ಅರಣ್ಯ ಬೆಳೆಸಲು ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

      ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ತಂಬಕದ ಮಾತನಾಡಿ, ನೆಟ್ಟ ಗಿಡಗಳಿಗೆ ನೀರುಣಿಸುವುದು ಪುಣ್ಯದ ಕೆಲಸ. ಇಂದು ಗಿಡಗಳನ್ನು ನೆಟ್ಟಿರುವ ವಿದ್ಯಾರ್ಥಿಗಳು ವಾರಕ್ಕೊಮ್ಮೆ ತಾವು ನೆಟ್ಟಿರುವ ಗಿಡಗಳಿಗೆ ನೀರು ಹಾಕಬೇಕು. ಮರ ಗಿಡಗಳಿಗೂ ಸಹ ಜೀವವಿದೆ ಎಂದು ನಾವೆಲ್ಲಾ ಅರಿಯಬೇಕು. ಅವುಗಳಿಗೂ ನಮ್ಮಂತೆಯೇ ನೋವಾಗುತ್ತದೆ. ಬೆಳೆದಿರುವ ಮರಗಳನ್ನು ಯಾರೂ ಕತ್ತರಿಸಬೇಡಿ ಎಂದು ಮಾರ್ಮಿಕವಾಗಿ ನುಡಿದರು.

     ಬರಮುಕ್ತ ಕರ್ನಾಟಕ ಆಂದೋಲನಾ ಸಮಿತಿ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಬರಗಾಲದಲ್ಲಿಯೂ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿರುವುದು ನಿಜಕ್ಕೂ ಶ್ಲಾಘನೀಯ. ರಾಜ್ಯದಾದ್ಯಂತ ಇದೇ ರೀತಿ ಗಿಡಗಳನ್ನು ನೆಡುವ ಹಾಗೂ ಬೀಜದುಂಡೆಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾದರೆ ಬರಗಾಲವನ್ನು ದೂರ ಮಾಡಬಹುದು. ಅರಣ್ಯ ನಾಶದಿಂದ ಬರಗಾಲ ಎದುರಾಗಿದೆ. ಸತತವಾಗಿ ಬರಗಾಲವನ್ನು ಎದುರಿಸುತ್ತಿರುವ ರಾಜ್ಯದಲ್ಲಿ ಅಂತರ್ಜಲಮಟ್ಟ ಕುಸಿಯುತ್ತಿದೆ. ಅಲ್ಲದೆ, ವಿಷಯುಕ್ತ ನೀರು ದೊರೆಯುತ್ತಿದೆ. ಇದು ಆತಂಕದ ವಿಷಯ. ಮರಳು ದಂಧೆಯಿಂದ ನದಿ ಮೂಲಗಳು ಬರಿದಾಗುತ್ತಿದೆ. ನಾಡನ್ನು ಹಸಿರಾಗಿಸಿದಾಗ ಮಾತ್ರ ಉತ್ತಮ ಪರಿಸರ ದೊರೆಯುತ್ತದೆ ಎಂದು ತಿಳಿಸಿದರು.

      ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಸಿ. ಗಿರೀಶ್ ಮಾತನಾಡಿ, ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು 1 ಸಾವಿರ ಸಸಿಗಳನ್ನು ನೆಟ್ಟು 7 ಸಾವಿರ ಬೀಜದುಂಡೆಗಳನ್ನು ಬಿತ್ತನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳೀಯವಾಗಿ ಬೆಳೆಯುವ ಆಲ, ಅರಳಿ, ಬಸುರಿ, ನೇರಳೆ, ಹುಣಸೆ, ನೆಲ್ಲಿ ಸಸಿಗಳನ್ನು ಮಕ್ಕಳಿಂದಲೇ ನೆಡಿಸಲಾಯಿತು. ಈ ಕಾರ್ಯಕ್ರಮದಡಿ ನೆಟ್ಟಿರುವ ಸಸಿಗಳ ರಕ್ಷಣೆಯನ್ನು ಮೂರು ವರ್ಷಗಳ ಕಾಲ ಅರಣ್ಯ ಇಲಾಖೆಯಿಂದ ನಿರ್ವಹಣೆ ಮಾಡಲಾಗುವುದು. ಅಲ್ಲದೇ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆ ತಿಳಿಸುವ ಉದ್ದೇಶದಿಂದ ಸಸ್ಯಸಂತೆಯಲ್ಲಿ 500 ಸಸಿಗಳನ್ನು ಮಕ್ಕಳಿಗೆ ವಿತರಣೆ ಮಾಡಲಾಯಿತು.

       ಅರಣ್ಯ ಸಂರಕ್ಷಣಾಧಿಕಾರಿ ಎಸ್.ಆರ್. ನಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಾ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ರಾಮಯ್ಯ ಪ್ರತಿಜ್ಞಾವಿಧಿ ಬೋಧಿಸಿದರು. ಶಿರಾ ತಾಲ್ಲೂಕಿನ ಸುಮಾರು 10 ಶಾಲಾ-ಕಾಲೇಜಿನ ಸಾವಿರ ವಿದ್ಯಾರ್ಥಿಗಳು ಸಸಿ ಹಾಗೂ ಬೀಜದುಂಡೆಗಳನ್ನು ನೆಟ್ಟು ಸಂಭ್ರಮಿಸಿದರು.

       ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್‍ಬಾಬಾ ರೈ, ಮರಡೀಗುಡ್ಡ ರಂಗನಾಥ ಸ್ವಾಮಿ ಧಾರ್ಮಿಕ ಮತ್ತು ದತ್ತಿ ಸಂಸ್ಥೆಯ ಅಧ್ಯಕ್ಷ ಕಾಂತರಾಜು, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬದಾಮಿಕರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ಅನಿಲ್, ಶಿರಾ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸಿ.ಹೆಚ್. ಜಗಧೀಶ್, ಬಿ.ಆರ್.ದೇವರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ಯರಡೋಣಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ದಶರಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

(Visited 52 times, 1 visits today)

Related posts