ಮಳೆನೀರುಗಾಲುವೆಗಳಿಗೆ ಪರಿಸರಸ್ನೇಹಿ ರೂಪಕ್ಕೆ ಮುಂದಾದ ಸ್ಮಾರ್ಟ್‍ಸಿಟಿ

      ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಹಲವಾರು ಸ್ಮಾರ್ಟ್ ಕಾಮಗಾರಿಗಳಲ್ಲಿ ಮಳೆನೀರುಗಾಲುವೆಗಳಿಗೆ ಪರಿಸರಸ್ನೇಹಿ ರೂಪ ನೀಡುವ ಕಾಮಗಾರಿಯೂ ಒಂದಾಗಿದ್ದು, ಸ್ಮಾರ್ಟ್ ಸಿಟಿ ಲಿಮಿಟೆಡ್ ಈ ಪ್ರಯತ್ನಕ್ಕೆ ಮುಂದಾಗಿದೆ.

      ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರ ಪರಿಕಲ್ಪನೆಯಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಯೋಜನಾ ನಿರ್ವಹಣಾ ಸಲಹೆಗಾರ ಸಂಸ್ಥೆಯಾದ ಐಪಿಇ ಗ್ಲೋಬಲ್ ಉಸ್ತುವಾರಿಯಲ್ಲಿ ರೂಪುಗೊಳ್ಳುತ್ತಿರುವ ಈ ಕಾಮಗಾರಿಯು ಈಗಾಗಲೇ ಚಾಲನೆಯಲ್ಲಿದೆ.

ತ್ಯಾಜ್ಯ ನೀರು ಸೇರದ ನೀರ್ಗಾಲುವೆ ನಿರ್ಮಾಣ:

      ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ರಿಂಗ್ ರಸ್ತೆಯ ಎರಡೂ ಬದಿ(14.2 ಕಿ.ಮೀ ಉದ್ದ)ಯಲ್ಲಿ ಈ ಪರಿಸರಸ್ನೇಹಿ ರೂಪ ಪಡೆಯಲು ಮಳೆನೀರುಗಾಲುವೆಗಳು ಸಿದ್ಧವಾಗಿವೆ. ಸದ್ಯ ಈ ಮಳೆನೀರುಗಾಲುವೆಗಳಲ್ಲಿ ತ್ಯಾಜ್ಯನೀರು ಹರಿಯುತ್ತಿದ್ದು, ಮಳೆಗಾಲದಲ್ಲೂ ಸ್ವಚ್ಛ ನೀರು ಹರಿಯುವ ದೃಶ್ಯ ಕಾಣಸಿಗದಾಗಿದೆ. ಅಲ್ಲದೆ ಮಳೆ ನೀರಿನೊಂದಿಗೆ ತ್ಯಾಜ್ಯ ನೀರು ಸೇರಿಕೊಂಡು ಹರಿವನ್ನು ಇನ್ನಷ್ಟು ಕಲುಷಿತಗೊಳಿಸುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ಒಳ ಕೊಳವೆ ಚರಂಡಿಗಳಲ್ಲಿ ಮಳೆನೀರು ಮಾತ್ರ ಹರಿಯುವಂತೆ ಮಾಡಲು ಸ್ಮಾರ್ಟ್ ಸಿಟಿ ತಾಂತ್ರಿಕ ಅಧಿಕಾರಿಗಳು ಮಳೆನೀರುಗಾಲುವೆಗಳನ್ನು ಒಳಗೊಳವೆ ಚರಂಡಿ ನೀರುಗಾಲುವೆಗಳಾಗಿ ಪರಿವರ್ತಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ.

 ದೇಶದಲ್ಲಿಯೇ ಮಾದರಿ:

      ಆಧುನಿಕ ಹಾಗೂ ವಿನೂತನ ಶೈಲಿಯಿಂದ ಕೂಡಿರುವ ಈ ಒಳ ಕೊಳವೆ ಚರಂಡಿ ವ್ಯವಸ್ಥೆಯು ದೇಶದಲ್ಲಿಯೇ ಮಾದರಿ ಎಂದು ಹೇಳಲಾಗಿದೆ. ಸುಮಾರು 8.5 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿರುವ ಈ ಒಳ ಕೊಳವೆ ಚರಂಡಿ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ತುಮಕೂರಿನಲ್ಲಿ ಕಾರ್ಯರೂಪಕ್ಕೆ ತರಲಾಗುತ್ತಿದೆ.

ಯೋಜನೆಯಿಂದ ಅಂತರ್ಜಲ ವೃದ್ಧಿ:

      ಅಂತರ್ಜಲವನ್ನು ವೃದ್ಧಿಸುವ ಸಲುವಾಗಿ ಈ ಒಳ ಕೊಳವೆ ಚರಂಡಿ ಬಳಿ ಆಧುನಿಕ ರೀತಿಯಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಲಾಗುವುದು. ಇಂಗು ಗುಂಡಿಗಳನ್ನು ನಿರ್ಮಿಸುವುದರಿಂದ ಮಳೆನೀರು ನೆಲದಾಳಕ್ಕೆ ಇಳಿದು ಅಂತರ್ಜಲ ವೃದ್ಧಿಯಾಗುತ್ತದೆ. ಭವಿಷ್ಯದಲ್ಲಿ ಅಂತರ್ಜಲ ವೃದ್ಧಿಗೆ ಈ ಯೋಜನೆ ಸಹಕಾರಿ ಆಗಲಿದೆ ಎಂಬ ಕಾರಣಕ್ಕೆ ಇಂಗು ಗುಂಡಿಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಮೊದಲ ಹಂತದಲ್ಲಿ ನಗರದ ದೊಡ್ಡ ವಿಸ್ತೀರ್ಣದ ಮಳೆನೀರುಗಾಲುವೆಗಳನ್ನು ಮಾತ್ರ ಇಂಗು ಗುಂಡಿಗಳನ್ನಾಗಿ ನಿರ್ಮಿಸಲು ಆಯ್ಕೆ ಮಾಡಲಾಗಿದೆ.

      ಈ ಒಳ ಕೊಳವೆ ಚರಂಡಿ ಪೈಪ್‍ನ ಅಗಲ 0.9 ಮೀಟರ್‍ನಷ್ಟಿದ್ದು, ಪ್ರತಿ 50 ಮೀ. ಅಂತರದಲ್ಲಿ 1.2 ಮೀ. ಅಗಲ ಹಾಗೂ 1.5 ಮೀ. ಆಳದ ಇಂಗು ಗುಂಡಿಗಳನ್ನು ಸಿಮೆಂಟ್ ರಿಂಗ್ ಬಳಸಿ ನಿರ್ಮಿಸಲಾಗುವುದು. ಗುಂಡಿಯೊಳಗೆ ನಾನಾ ಗಾತ್ರದ ಜಲ್ಲಿಯನ್ನು ತುಂಬಿಸಲಾಗುವುದು. ಇದರಿಂದ ಮಳೆನೀರು ಹರಿಯುವ ವೇಳೆ ಈ ಇಂಗು ಗುಂಡಿಗಳೊಳಗೆ ನೀರು ಬಸಿದು ನೆಲ ಸೇರುತ್ತದೆ. ಮಳೆ ಬಿದ್ದ ಸ್ಥಳದಲ್ಲೇ ನೀರು ಭೂಮಿ ಸೇರಿದಲ್ಲಿ ಆ ಭಾಗದ ಭೂಮಿಯ ತೇವಾಂಶದ ಪ್ರಮಾಣ ಹೆಚ್ಚಾಗಿ ಅಂತರ್ಜಲ ವೃದ್ಧಿಯಾಗಲಿದೆ.

ಬಹುಪಯೋಗಿ ಯೋಜನೆ:

      ವರ್ತುಲ ರಸ್ತೆಯ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ಈ ಪರಿಸರಸ್ನೇಹಿ ಕೊಳವೆ ಒಳ ಚರಂಡಿ ನೀರುಗಾಲುವೆ ಬಹುಪಯೋಗಿಯಾಗಿದ್ದು, ನೀರುಗಾಲುವೆ ಮೇಲೆ ಮಿನಿ ಪಾರ್ಕ್(ಉದ್ಯಾನವನ), ವಾಹನ ನಿಲುಗಡೆ ಸೇರಿದಂತೆ ಮರಗಳನ್ನು ಸಹ ಬೆಳೆಸಬಹುದಾಗಿದೆ. ಆರ್ ಸಿ ಸಿ ಬಾಕ್ಸ್ ಡ್ರೈನ್‍ಗೂ ಈ ನೂತನ ಚರಂಡಿ ವ್ಯವಸ್ಥೆಗೂ ತುಲನೆ ಮಾಡಿದಾಗ ಸುಮಾರು ಶೇಕಡ 25ರಷ್ಟು ವೆಚ್ಚ ಕಡಿಮೆಯಾಗಲಿದೆ ಎಂದು ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕ ಭೂಬಾಲನ್ ಹಾಗೂ ತಾಂತ್ರಿಕ ಅಧಿಕಾರಿಗಳು ತಿಳಿಸಿದ್ದಾರೆ.

(Visited 18 times, 1 visits today)

Related posts

Leave a Comment