ಸಂಸದರ ಅವಹೇಳನ ಮಾಡಿದ ಸಚಿವ ಶ್ರೀನಿವಾಸ್ ವಿರುದ್ಧ ಬಿಜೆಪಿ ಆಕ್ರೋಶ!!

ತುಮಕೂರು :

      ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಆರ್ ಶ್ರೀನಿವಾಸ್ ಅವರು ಸಂಸದ ಜಿ ಎಸ್ ಬಸವರಾಜು ಅವರನ್ನು ಅವಹೇಳನಾಕಾರಿಯಾಗಿ ನಿಂದಿಸಿದ್ದಾರೆಂದು ಆಪಾದಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ನಗರದ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಸಂಸ್ಕೃತಿ ಇಲ್ಲದ ಶ್ರೀನಿವಾಸ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

      ಸಂಸದ ಜಿ ಎಸ್ ಬಸವರಾಜು ಅವರನ್ನು ಬಫೂನ್ ಎಂದು ಏಕ ವಚನದಲ್ಲಿ ನಿಂದಿಸಿದ್ದನ್ನು ಖಂಡಿಸಿದ ಕಾರ್ಯಕರ್ತರು, ಸಾಮಾಜಿಕ ಪ್ರಜ್ಞೆಯ ಅರಿವಿಲ್ಲದ, ಸಚಿವ ಸ್ಥಾನಕ್ಕೆ ಅನರ್ಹರಂತೆ ನಡೆದುಕೊಳ್ಳುವ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಂಸದರನ್ನು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

      ಕೆಲ ಕಾಲ ಬಿಜಿಎಸ್ ವೃತ್ತದಲ್ಲಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಸಚಿವರ ವರ್ತನೆ ಖಂಡಿಸಿದರು.
ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಾ. ಎಂ ಆರ್ ಹುಲಿನಾಯ್ಕರ್, ಸಚಿವ ಶ್ರೀನಿವಾಸ್ ಅವರು ಸಂಸದರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರುವುದು ಖಂಡನಾರ್ಹ, 5 ಬಾರಿ ಸಂಸದರಾಗಿ, ಜನಪರ ಕಾಳಜಿ ಹೊಂದಿರುವ ರಾಜಕೀಯ ಮುತ್ಸದ್ದಿ ಜಿ ಎಸ್ ಬಸವರಾಜು ಅವರನ್ನು ಟೀಕಿಸಿರುವುದು ಶಿಕ್ಷಣ ಮಂತ್ರಿಗೆ ತಕ್ಕದ್ದಲ್ಲ ಎಂದರು.

       ಶ್ರೀನಿವಾಸ್ ತಮ್ಮ ಹೇಳಿಕೆ ಹಿಂಪಡೆಯಬೇಕು, ಮುಂದೆ ಇಂತಹ ಭಾಷೆ ಬಳಸದಂತೆ ಎಚ್ಚರವಹಿಸಬೇಕು. ವ್ಯಕ್ತಿನಿಂದನೆ ಮಾಡುವುದು ಅವರಿಗೆ ಶೋಭೆ ತರುವಂತಾದ್ದಲ್ಲ ಎಂದರು.

       ಜಿಲ್ಲೆಗೆ ಹೇಮಾವತಿ ನೀರು ತರುವ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಜಿ ಎಸ್ ಬಸವರಾಜು ಅವರು, ನಾಲೆಗೆ ಭೇಟಿ ನೀಡಿ ಅದರ ದುಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು ಅದರ ದುರಸ್ಥಿತಿ ಒತ್ತಾಯಿಸಿದ್ದಾರೆ, ಹಲವಾರು ಅಭಿವೃದ್ಧಿ ಕಾರ್ಯಗಳು ಕಾರ್ಯಗತಗೊಳ್ಳಲು ಕಾರಣಕರ್ತರಾಗಿದ್ದಾರೆ ಇಂತಹವರ ಬಗ್ಗೆ ಅವಹೇಳನಾಕಾರಿ ಮಾತನಾಡಿರುವುದು ಸರಿಯಲ್ಲ ಎಂದು ಡಾ. ಹುಲಿನಾಯ್ಕರ್ ಹೇಳಿದರು.

      ಮುಖಂಡ ದಿಲಿಪ್ ಕುಮಾರ್ ಮಾತನಾಡಿ, ನಾಲ್ಕು ಬಾರಿ ಗುಬ್ಬಿ ಶಾಸಕರಾದ ನೀವು ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಮಾಡಿದ್ದೀರಿ ಎಂಬುದನ್ನು ಜನರಿಗೆ ತಿಳಿಸಿ ಎಂದರು.

       ಜಿ ಎಸ್ ಬಸವರಾಜು ಅವರು ಗುಬ್ಬಿಯಲ್ಲಿ ಹೆಚ್‍ಎಎಲ್ ಸ್ಥಾಪನೆಗೊಳ್ಳಲು ಹೆಚ್ಚು ಕಾರಣರಾಗಿದ್ದಾರೆ, ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಆದರೆ ನೀವು ಬರೀ ಟೇಪ್ ಕಟ್ ಮಾಡಿಕೊಂಡು ಬಫೂನ್ ರೀತಿ ನಡೆದುಕೊಳ್ಳುತ್ತಿದ್ದೀರಿ ಎಂದು ಸಚಿವ ಶ್ರೀನಿವಾಸ್ ರನ್ನು ಟೀಕಿಸಿದರು.

     ಮಂತ್ರಿಯಾಗಿ ಹೇಮಾವತಿ ನೀರು ತರಲು ಕಾಳಜಿವಹಿಸಲಿಲ್ಲ, ಬೋರ್ ವೆಲ್ ಹಾಕಿಸುವಾಗಲ್ಲೂ, ರಸ್ತೆ ಮಾಡಿಸುವಲ್ಲೂ ಪಕ್ಷ ಬೇಧ ಮಾಡುತ್ತೀರಿ. ರಾಮನಗರ ಜಿಲ್ಲೆಗೆ ನಮ್ಮ ಪಾಲಿನ ನೀರು ಹರಿಸುವ ಹೇಮಾವತಿ ಎಕ್ಸ್ ಪ್ರೆಸ್ ಚಾನಲ್‍ಗೆ ವಿರೋಧ ಮಾಡಲಿಲ್ಲ ಎಂದು ಹೇಳಿದರು.

      ಮುಖಂಡ ಜಿ ಎನ್ ಬೆಟ್ಟಸ್ವಾಮಿ ಮಾತನಾಡಿ, ಜಿ ಎಸ್ ಬಸವರಾಜು ನಿಮಗೆ ಎಷ್ಟು ಸಹಾಯ ಮಾಡಿದ್ದಾರೆ ಎಂದು ನಿಮ್ಮ ತಂದೆಯನ್ನು ಕೇಳಿ, ಎಂದು ಸಚಿವ ಶ್ರೀನಿವಾಸ್ ಗೆ ಹೇಳಿದ ಅವರು, ಎಣ್ಣೆ ಅಳೆಯೋರನ್ನು, ಕೆಟ್ಟ ನಡತೆಯವರನ್ನು ಶಿಕ್ಷಣ ಮಂತ್ರಿ ಮಾಡಿದ್ದು ರಾಜ್ಯದ ದುರಂತ, ಸಂಸ್ಕೃತಿಯೇ ಇಲ್ಲದವರು ಶಿಕ್ಷಣ ಮಂತ್ರಿಯಾಗಿರುವುದು ನಮ್ಮ ದುರ್ದೈವ ಎಂದರು.ದೇವೇಗೌಡರು ಸೋತರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಲೋಕಸಭಾ ಚುನಾವಣೆ ವೇಳೆ ಹೇಳಿದ್ದ ಶ್ರೀನಿವಾಸ್ ಅದರಂತೆ ನಡೆದುಕೊಂಡು ಶಾಸಕ ಸ್ಥಾನ ತ್ಯಜಿಸಲಿ ಎಂದರು.

      ಮುಖಂಡ ಬಿ ಬಿ ಮಹದೇವಯ್ಯ ಮಾತನಾಡಿ, ಸಂಸದರಾಗಿ ಗೆದ್ದ ಜಿ ಎಸ್ ಬಸವರಾಜು ಹೇಗೆ ಹೇಮಾವತಿ ನೀರು ಬಿಡಿಸುತ್ತಾರೊ ಎಂದು ಹೇಳಿದ ಶ್ರೀನಿವಾಸ್, ಒಬ್ಬ ಜವಾಬ್ದಾರಿ ಸಚಿವನಾಗಿ ನಡೆದುಕೊಳ್ಳದ ಇವರು ಮಂತ್ರಿಯಾಗಿ ಉಳಿದಿರುವುದು ನಾಚಿಕೆಗೇಡು, ನಾಲಗೆ ಹರಿಬಿಡುತ್ತಾ ಮಾತನಾಡುವ ಶ್ರೀನಿವಾಸ್ ಸಚಿವರಾಗಲು ನಾಲಾಯಕ್ ಎಂದರು.ವೀರಶೈವರು, ಗೊಲ್ಲರು, ದಲಿತ ಸಮಾಜವನ್ನು ಒಡೆಯುವ ಮೂಲಕ ಚುನಾವಣೆಯಲ್ಲಿ ಗೆದ್ದರೇ ಹೊರತು ವೈಯಕ್ತಿಕ ವರ್ಚಸ್ಸಿನಿಂದಲ್ಲ ಎಂದರು.

      ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶಾರದಾ ನರಸಿಂಹ ಮೂರ್ತಿ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್, ನಗರಪಾಲಿಕೆ ಸದಸ್ಯರಾದ ಸಿ ಎನ್ ರಮೇಶ್, ಬಿ ಜಿ ಕೃಷ್ಣಪ್ಪ, ಮಲ್ಲಿಕಾರ್ಜುನಯ್ಯ, ಮಂಜುಳಾ, ಗಿರಿಜಾ, ಮುಖಂಡರಾದ ಸರೋಜಗೌಡ, ಧನಿಯಾಕುಮಾರ್, ಹೆಬ್ಬೂರು ರಂಗಯ್ಯ, ಹೊನ್ನೇಶ್ ಕುಮಾರ್ ಶಿವರುದ್ರಯ್ಯ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

(Visited 8 times, 1 visits today)

Related posts

Leave a Comment