ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ ಮಾಜಿ ಶಾಸಕ ಸುರೇಶ್‍ಗೌಡ

ತುಮಕೂರು:

      ಲಾಕ್‍ಡೌನ್‍ನಿಂದ ಸಂಕಷ್ಟಕ್ಕೊಳಗಾದ ಗ್ರಾಮಾಂತರದ ಬಡ ಕುಟುಂಬಗಳಿಗೆ ಮಾಜಿ ಶಾಸಕ ಬಿ.ಸುರೇಶ್‍ಗೌಡ ಅವರು ಅಗತ್ಯ ದಿನಸಿ ವಸ್ತುಗಳು, ಮಾಸ್ಕ್ ಮತ್ತು ರೈತರಿಂದ ಖರೀದಿಸಿದ ತರಕಾರಿಯನ್ನು ವಿತರಿಸುವ ಕಾರ್ಯಕ್ರಮಕ್ಕೆ ಕಂದಾಯ ಸಚಿವರಾದ ಆರ್.ಅಶೋಕ್ ಚಾಲನೆ ನೀಡಿದರು.

      ಗ್ರಾಮಾಂತರದ ಊರ್ಡಿಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಹಾರದ ಕಿಟ್ ವಿತರಿಸಿ ಮಾತನಾಡಿದ ಆರ್.ಅಶೋಕ್, ಗ್ರಾಮಾಂತರದ ಮಾಜಿ ಶಾಸಕರಾದ ಬಿ.ಸುರೇಶ್‍ಗೌಡರು ರೈತರಿಂದ ತರಕಾರಿ ಖರೀಧಿಸಿ, ಜೊತೆಗೆ ಅಗತ್ಯ ದಿನಬಳಕೆಯ ವಸ್ತುಗಳನ್ನು ಬಡ ಜನತೆಗೆ ನೀಡುತ್ತಿರುವುದು ಶ್ಲಾಘನೀಯ. ಇದೇ ರೀತಿ ದಾನಿಗಳು ಮುಂದೆ ಬಂದು ಬಡ ಜನತೆಗೆ ನೆರವಾಗಬೇಕೆಂದು ಮನವಿ ಮಾಡಿದರು.

      ಇಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಶ್ರಮ ವಹಿಸಿ ಕೆಲಸ ನಿರ್ವಹಿಸಿದ್ದರಿಂದ ಕೊರೋನ ವೈರಸ್ ನಿಯಂತ್ರಣಕ್ಕೆ ಬಂದಿದೆ. ಇದಕ್ಕೆ ಸಾರ್ವಜನಿಕರೂ ಸಹಕರಿಸಿದ್ದಾರೆ ಎಂದು ಬಣ್ಣಿಸಿದರು.
ಸಾರ್ವಜನಿಕರು ಹೊರಗೆ ಹೋಗದೆ ಮನೆಯಲ್ಲೇ ಇದ್ದು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ, ಹೊರಗೆ ಬಂದರೆ ಆರೋಗ್ಯಕ್ಕೆ ಹಾನಿಯಾಗುತ್ತದೆ. ಸಾಧ್ಯವಾದಷ್ಟು ಕೈಗಳನ್ನು ಪ್ರತಿನಿತ್ಯ 20 ಸಲವಾದರೂ ಸೋಪಿನಿಂದ ತೊಳೆದುಕೊಂಡು ಶುಚಿಯಾಗಿಟ್ಟುಕೊಳ್ಳಿ, 60 ವರ್ಷ ಮೇಲ್ಪಟ್ಟ ವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಮಕ್ಕಳನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.

      ಈ ಹಿಂದೆ ಪ್ಲೇಗ್ ಕಾಣಿಸಿಕೊಂಡು ಜನರನ್ನು ಆತಂಕಕ್ಕೆ ದೂಡಿತ್ತು. ಈಗ ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಈ ಎರಡೂ ಚೀನಾದಿಂದಲೇ ಬಂದಂತಹ ರೋಗಗಳಾಗಿದ್ದು, ಚೀನಾ ಒಂದು ರೀತಿ ರೋಗಗಳ ಉಗಮ ಸ್ಥಾನ ಎಂದರೆ ತಪ್ಪಾಗಲಾರದು. ಈಗ ಕಾಣಿಸಿಕೊಂಡಿರುವ ರೋಗ ಯುದ್ದಕ್ಕಿಂತ ಭೀಕರ ರೋಗವಾಗಿದ್ದು, ಇದರಿಂದ ಅಮೇರಿಕಾದಲ್ಲಿ 30 ಸಾವಿರ ಜನ ಸಾವನ್ನಪ್ಪಿದ್ದಾರೆ. ನಮ್ಮ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮುಂಜಾಗ್ರತೆ ತೆಗೆದುಕೊಂಡು ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ನಮ್ಮಲ್ಲಿ ಕೊರೋನ ವೈರಸ್‍ನಿಂದ ಆಗಬಹುದಾದ ದೊಡ್ಡ ನಷ್ಟವನ್ನು ತಪ್ಪಿಸಿದ್ದಾರೆ. ರಾಜ್ಯದಲ್ಲಿಯೂ ಕೂಡ ದೇಶದಲ್ಲಿ ಲಾಕ್‍ಡೌನ್ ಘೋಷಣೆ ಮಾಡುವ ವಾರದ ಮೊದಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲಾಕ್‍ಡೌನ್ ಘೋಷಿಸಿ ಉತ್ತಮ ನಿರ್ಣಯ ಕೈಗೊಂಡಿದ್ದಾರೆ ಎಂದು ತಿಳಿಸಿದರು.

      ಸಾರ್ವಜನಿಕರು ಯಾರೇ ಆಗಿರಲಿ ನೆಗಡಿ, ಕೆಮ್ಮು, ಜ್ವರ, ಗಂಟಲು ನೋವು ಇಂತಹ ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಯಾವುದೇ ಇಲಾಖೆಗೆ ಮಾಹಿತಿ ನೀಡಿದರೆ ನಿಮ್ಮ ಮನೆಯ ಬಳಿಯೇ ವಾಹನ ಬಂದು ನಿಮ್ಮನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಲಿದೆ. ಇದು ಸರ್ಕಾರದಿಂದ ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ, ನಿಮ್ಮ ಆರೋಗ್ಯ ಗುಣವಾಗುವವರೆಗೂ ಸೂಕ್ತ ಚಿಕಿತ್ಸೆ ನೀಡಿ ನಿಮ್ಮ ಮನೆಗೆ ಕಳುಹಿಸಿಕೊಡುವ ಜವಾಬ್ದಾರಿ ಜಿಲ್ಲಾಡಳಿತ ವಹಿಸಲಿದೆ ಎಂದು ಹೇಳಿದರು.

      ಆಹಾರ ಕಿಟ್ ವಿತರಣೆ ಸಂದರ್ಭದಲ್ಲಿ ಫಲಾನುಭವಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಕಿಟ್ ಪಡೆದಿದ್ದಕ್ಕೆ ಸಚಿವ ಆರ್. ಅಶೋಕ್ ಬಿ.ಸುರೇಶ್‍ಗೌಡರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

       ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಸುರೇಶ್‍ಗೌಡ, ಮಾಜಿ ಸಚಿವ ಎಸ್.ಶಿವಣ್ಣ, ಜಿಲ್ಲಾಧಿಕಾರಿ,ಡಾ.ಕೆ.ರಾಕೇಶ್‍ಕುಮಾರ್, ಬಿಜೆಪಿ ಮುಖಂಡ ಲಕ್ಷ್ಮೀಶ್, ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್ ಮೋಹನ್‍ಕುಮಾರ್, ಗ್ರಾಪಂ ಅಧ್ಯಕ್ಷೆ ತಾರಾದೇವಿ ರಂಗನಾಥ್, ಸದಸ್ಯ ಸುಧೀರ್, ತಾಪಂ ಸದಸ್ಯ ಎಸ್.ರವಿ, ಮಾಜಿ ಎಪಿಎಂಸಿ ಅಧ್ಯಕ್ಷ ಓಂ ನಮೋ ನಾರಾಯಣ, ನರಸಿಂಹಮೂರ್ತಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಅರುಣ್‍ಕುಮಾರ್, ಕುಮಾರ್, ಮಂಜುನಾಥ್, ಸೊಸೈಟಿ ಅಧ್ಯಕ್ಷ ಸೋಮಣ್ಣ, ಸುನೀಲ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.

(Visited 135 times, 1 visits today)

Related posts