ಆಟದ ಮೈದಾನ ಉಳಿಸಿ ಕಟ್ಟಡ ನಿರ್ಮಾಣ : ಜಿಪಂ ಎಇಇ ಭರವಸೆ

ಹುಳಿಯಾರು:

       ಹುಳಿಯಾರು ಪಟ್ಟಣದಲ್ಲಿನ ಏಕೈಕ ಆಟದ ಮೈದಾನವಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನವನ್ನು ಉಳಿಸಿ ಶಾಲಾ ಕಟ್ಟಡದ ಕಾಮಗಾರಿ ನಿರ್ಮಾಣ ಮಾಡುವುದಾಗಿ ಜಿಲ್ಲಾ ಪಂಚಾಯ್ತಿ ಎಇಇ ರವಿಕುಮಾರ್ ಭರವಸೆ ನೀಡಿದ್ದಾರೆ.

ಹುಳಿಯಾರು ಪಟ್ಟಣದ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆಗೆ ಹೃದಯಭಾಗದಲ್ಲಿರುವ ಈ ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನ ಆಸರೆಯಾಗಿದೆ. ಅದ್ದೂರಿ ಸಾರ್ವಜನಿಕ ಕಾರ್ಯಕ್ರಮ, ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ, ಆರ್‍ಎಸ್‍ಎಸ್ ಶಾಖೆ ಸೇರಿದಂತೆ ಹಿರಿಯ ನಾಗರಿಕರ ವಾಕಿಂಗ್, ಸ್ಥಳಿಯ ಯುವಜನತೆಯ ಆಟ, ವ್ಯಾಯಾಮ ಎಲ್ಲವೂ ಇಲ್ಲಿ ನಡೆಯುತ್ತಿದೆ. ಆದರೆ ಈ ಆಟದ ಮೈದಾನದಲ್ಲೇ ಕರ್ನಾಟಕ ಪಬ್ಲಿಕ್ ಶಾಲೆಗೆ ನೂತನವಾಗಿ ಮಂಜೂರಾಗಿರುವ ಕಟ್ಟಡಗಳನ್ನು ಕಟ್ಟಲು ಗುತ್ತಿಗೆದಾರರು ಮುಂದಾಗಿದ್ದರು.

      ಕಟ್ಟಡದ ಮಾರ್ಕ್ ಮಾಡುವಾಗಲೇ ಸ್ಥಳಿಯರು ಮನವಿ ಮಾಡಿದ್ದರೂ ಕೇಳದೆ ಜೆಸಿಬಿ ಮೂಲಕ ಪಿಲ್ಲರ್ ಗುಂಡಿಗಳನ್ನು ಸಹ ತೆಗೆಸಿದರು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿ ಪ್ರತಿಭಟನೆಗೆ ಸಿದ್ಧತೆ ಸಹ ನಡೆಸಿದರು. ವಿಷಯ ತಿಳಿದ ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ನಿರ್ಮಾಣದಿಂದಾಗುವ ಸಮಸ್ಯೆಯನ್ನು ಅರಿತು ಜಿಪಂ ಎಂಜಿನಿಯರ್‍ಗೆ ದೂರವಾಣಿ ಕರೆ ಮಾಡಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸ್ಥಳಿಯರ ಅಹವಾಲು ಆಲಿಸಿ ಮುಂದಿನ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದ್ದರು.

      ಅದರಂತೆ ಜಿಪಂ ಎಇಇ ರವಿಕುಮಾರ್ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಮತ್ತು ಸ್ಥಳೀಯ ಯುವಕರು ಶಾಲಾ ಕೊಠಡಿಗಳನ್ನು ಕಟ್ಟಲು ಶಾಲಾ ಆವರಣದಲ್ಲಿ ಇತರೆಡೆ ಸ್ಥಳಾವಕಾಶ ಇದ್ದರೂ ಕೂಡ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರ ಬಳಕೆಗೆ ಮೀಸಲಿದ್ದ ಲಕ್ಷಾಂತರ ರೂ. ವೆಚ್ಚದಲ್ಲಿ ಕಟ್ಟಿದ ಪ್ಲಾಟ್‍ಪಾರಂ ಮುಂಭಾಗದಲ್ಲಿ ಕಟ್ಟಲು ಮುಂದಾಗಿದ್ದಾರೆ ಎಂದು ಆರೋಪಿಸಿದರು. ವಸ್ತುಸ್ಥಿತಿ ಅರಿತ ಎಂಜಿನಿಯರ್ ಪಿಲ್ಲರ್‍ಗೆ ತೆಗೆದಿರುವ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ಆದೇಶಿಸಿದರಲ್ಲದೆ ಕ್ರೀಡಾಂಗಣಕ್ಕೆ ತೊಂದರೆಯಾಗದ ಸ್ಥಳ ಗುರುತಿಸಿ ಕಟ್ಟಡ ಕಟ್ಟಲಾಗುವುದು ಎಂದು ಭರವಸೆ ನೀಡಿ ಹಿಂದಿರುಗಿದರು.

(Visited 6 times, 1 visits today)

Related posts

Leave a Comment