ಡಾ: ಶ್ರೀಶ್ರೀಶ್ರೀಶಿವಕುಮಾರ ಸ್ವಾಮೀಜಿ ಶಿವಸಾಯುಜ್ಯ: ರಾಜ್ಯಾದ್ಯಂತ 3 ದಿನಗಳ ಶೋಕಾಚರಣೆ

 ತುಮಕೂರು :

      ಹಲವಾರು ದಿನಗಳಿಂದ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ಧಗಂಗಾ ಮಠದ ಡಾ: ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಂದು ಬೆಳಿಗ್ಗೆ ಶಿವಸಾಯುಜ್ಯ ಹೊಂದಿದ್ದು, ರಾಜ್ಯಾದ್ಯಂತ 3 ದಿನಗಳ ಶೋಕಾಚರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

      ಮಠದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಇಂದು ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ಪಾರ್ಥೀವ ಶರೀರವನ್ನು ಮಠದ ಗೋಸಲ ಸಿದ್ಧೇಶ್ವರ ವೇದಿಕೆಯಲ್ಲಿ ಮಂಗಳವಾರ ಸಂಜೆವರೆಗೂ ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಇಡಲಾಗುವುದು. ಗೌರವಾರ್ಥವಾಗಿ ರಾಜ್ಯಾದ್ಯಂತ ಶೋಕಾಚರಣೆ ಅವಧಿಯಲ್ಲಿ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ಜರುಗುವುದಿಲ್ಲ ಹಾಗೂ ನಿಯತವಾಗಿ ರಾಷ್ಟ್ರಧ್ವಜವನ್ನು ಹಾರಿಸಲ್ಪಡುವ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು ಎಂದು ತಿಳಿಸಿದರು. ಪರಮಪೂಜ್ಯ ಸ್ವಾಮೀಜಿಯವರ ಕ್ರಿಯಾಸಮಾಧಿಯ ಕಾರ್ಯಗಳು, ಅಂತ್ಯಸಂಸ್ಕಾರವನ್ನು ಮಂಗಳವಾರ ಸಂಜೆ ನಡೆಸಲು ನಿಶ್ಚಯಿಸಲಾಯಿಸಲಾಗಿದೆ.

      ಅಂತಿಮ ದರ್ಶನವನ್ನು ಶಾಂತಿಯುತವಾಗಿ ನಡೆಸುವ ಹಿನ್ನಲೆಯಲ್ಲಿ ಸರ್ಕಾರದಿಂದ ಮುಂಜಾಗ್ರತಾ ಕ್ರಮವಾಗಿ ಸಕಲ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಶಿವಕುಮಾರ ಸ್ವಾಮೀಜಿ ಅವರ ಅಗಲಿಕೆ ನಾಡಿನ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದಷ್ಟು ನಷ್ಟಉಂಟಾಗಿದೆ. ಇವರು ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ. ಲಕ್ಷಾಂತರ ಮಕ್ಕಳಿಗೆ ವಸತಿ, ಶಿಕ್ಷಣ, ಅನ್ನ ದಾಸೋಹ ನೀಡಿದ ಪರಮಪೂಜ್ಯ ಶಿವಕುಮಾರ ಸ್ವಾಮೀಜಿ ಅವರನ್ನು ಆಧುನಿಕ ಬಸವಣ್ಣ ಎಂದು ಬಣ್ಣಿಸಿದರು.

      ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಮಾತನಾಡಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಅವರನ್ನು ಆಧುನಿಕ ಬಸವಣ್ಣ ಎಂದು ಇಡೀ ದೇಶ ಒಪ್ಪಿ; ಅಪ್ಪಿಕೊಂಡಿದ್ದು, ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸಿದರು. ಶ್ರೀಗಳು ತಮ್ಮ 111 ವರ್ಷಗಳ ಜೀವತ ಅವಧಿಯಲ್ಲಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅನನ್ಯ. ಅವರ ಆದರ್ಶ, ತತ್ವ, ಮಾರ್ಗದರ್ಶನಗಳು ನಮ್ಮೆಲ್ಲರಿಗೂ ದಾರಿ ದೀಪವಾಗಿವೆ. ಕೇಂದ್ರ ಸರ್ಕಾರವು ಶೀಘ್ರವಾಗಿ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡಬೇಕು ಎಂದು ಮನವಿ ಮಾಡಿದರು.

      ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಪವಾಡ ಪುರುಷರಾದ ಶ್ರೀಗಳು ಸುಮಾರು 90 ವರ್ಷಗಳ ಕಾಲ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ದಾಸೋಹ ನೀಡಿದ ದಾರ್ಶನಿಕರು. ಸಾಮಾನ್ಯ ಜನರೂ ಕೂಡ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಲು ನಗರದಲ್ಲಿ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

      ಐಜಿ ದಯಾನಂದ್ ಮಾತನಾಡಿ, ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಶ್ರೀಗಳ ಅಂತಿಮ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

 ರಾತ್ರಿ ಇಡೀ ಶ್ರೀಗಳ ದರ್ಶನ ಪಡೆದ ಭಕ್ತಾದಿಗಳು:-

      ಭಕ್ತಾಧಿಗಳು ರಾತ್ರಿ ಇಡೀ ಶ್ರೀಗಳ ಅಂತಿಮ ದರ್ಶನವನ್ನು ಪಡೆದು, ಶ್ರದ್ಧಾಂಜಲಿ ಅರ್ಪಿಸಿದರು. ಮಠದ ವಿದ್ಯಾರ್ಥಿಗಳು ದುಃಖತಪ್ತರಾಗಿ ಶ್ರೀಗಳ ದರ್ಶನವನ್ನು ಪಡೆದರು. ಸುತ್ತೂರು ಮಠ, ಆದಿಚುಂಚನಗಿರಿ ಮಠಾಧೀಶರು ಸೇರಿದಂತೆ ವಿವಿಧ ಸ್ವಾಮೀಜಿಗಳು, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ವಿವಿಧ ಗಣ್ಯರುಗಳು ಬಂದು ಶ್ರೀಗಳ ಅಂತಿಮ ದರ್ಶನ ಪಡೆದರು. ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ದರ್ಶನಕ್ಕೆ ಅನುವು ಮಾಡಿಕೊಡಲು ಸ್ಥಳದಲ್ಲಿಯೇ ಮೊಕ್ಕಾಂ ಇದ್ದು, ಕ್ರಮಕೈಗೊಂಡಿದ್ದಾರೆ.

 

 

(Visited 46 times, 1 visits today)

Related posts